ADVERTISEMENT

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 15:26 IST
Last Updated 29 ಆಗಸ್ಟ್ 2025, 15:26 IST
ಗೋಕರ್ಣ ಸಮೀಪದ ಮಾದನಗೇರಿ ಗ್ರಾಮದ ಮೂಲಕ ಹಾದುಹೋಗುವ ಗೋಕರ್ಣ–ಶಿರಸಿ ರಾಜ್ಯ ಹೆದ್ದಾರಿಯು ಶುಕ್ರವಾರ ಜಲಾವೃತಗೊಂಡಿತ್ತು.
ಗೋಕರ್ಣ ಸಮೀಪದ ಮಾದನಗೇರಿ ಗ್ರಾಮದ ಮೂಲಕ ಹಾದುಹೋಗುವ ಗೋಕರ್ಣ–ಶಿರಸಿ ರಾಜ್ಯ ಹೆದ್ದಾರಿಯು ಶುಕ್ರವಾರ ಜಲಾವೃತಗೊಂಡಿತ್ತು.   

ಕಾರವಾರ/ಹೊಸಪೇಟೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿದೆ. ಗೇರುಸೊಪ್ಪ ಜಲಾಶಯದಿಂದ 75 ಸಾವಿರ ಕ್ಯೂಸೆಕ್ ನೀರನ್ನು ಶರಾವತಿ ನದಿಗೆ ಹರಿಸಿದ್ದರಿಂದ ಹೊನ್ನಾವರದ ಕೆಲ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು.

ನದಿ ಪಾತ್ರದ ಹೆರಂಗಡಿ, ಸರಳಗಿ, ಗುಂಡಬಾಳ, ಬೇರೊಳ್ಳಿ ಸೇರಿ ಕೆಲ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿತು. 15 ಕಾಳಜಿ ಕೇಂದ್ರಗಳನ್ನು ತೆರೆದಿದ್ದು,ಬಾಧಿತ ಗ್ರಾಮಗಳ 358 ಜನರು ಆಶ್ರಯ ಪಡೆದಿದ್ದಾರೆ. ಭಟ್ಕಳ ಪಟ್ಟಣ ಸೇರಿ ಗ್ರಾಮಾಂತರ ಪ್ರದೇಶದಲ್ಲೂ ಜಲಾವೃತ ಸಮಸ್ಯೆ ಉಂಟಾಗಿದೆ.

ADVERTISEMENT

ಗೋಕರ್ಣ–ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತು ಹಲವು ಗಂಟೆ ಸಂಚಾರ ವ್ಯತ್ಯಯವಾಯಿತು. ಹೊನ್ನಾವರ ತಾಲ್ಲೂಕಿನ ಕರ್ನಲ್ ಹಿಲ್ ಸಮೀಪ ಅಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಕರಾವಳಿ ಭಾಗದ ಐದು ತಾಲ್ಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಮಲೆನಾಡು ಭಾಗದಲ್ಲಿ ಬಿರುಸಿನ ಮಳೆಯಿಂದಾಗಿ ಹೊಸಪೇಟೆ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಶುಕ್ರವಾರ ಏರಿಕೆ ಕಂಡುಬಂದಿದೆ. 14 ಗೇಟ್‌ ತೆರೆದು 55,512 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗಿದ್ದು, ಹಂಪಿಯ ಸ್ನಾನಘಟ್ಟ, ಕೆಲ ಸ್ಮಾರಕಗಳು ಮತ್ತೆ ಮುಳುಗುವ ಸ್ಥಿತಿಗೆ ತಲುಪಿವೆ.

ತುಂಗಾ, ಭದ್ರಾ ಅಣೆಕಟ್ಟೆಗಳಿಂದ ಅಧಿಕ ನೀರು ಬಿಡುತ್ತಿದ್ದು, ವರದಾ ನದಿಯಲ್ಲಿ ಹರಿವಿನ ಮಟ್ಟ ಏರಿದೆ.

ಉಡುಪಿಯಲ್ಲಿ ಧಾರಾಕಾರ ಮಳೆ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದೆ. ಬೈಂದೂರು ತಾಲ್ಲೂಕಿನ ಕೆಲವೆಡೆ ಜಮೀನು ಜಲಾವೃತವಾಗಿದೆ. ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಕಾಪು, ಹೆಬ್ರಿ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 9 ಸೆಂ.ಮೀ. ಮಳೆ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಗರ ಹಾಗೂ ಮೂಡಿಗೆರೆ, ಕಳಸ, ಕೊಪ್ಪ, ನರಸಿಂಹರಾಜಪುರ ಭಾಗದಲ್ಲಿ ನಿರಂತರ ಮಳೆಯಾಗಿದೆ.

ಹುಲಿಕಲ್‌–ದಾಖಲೆ ಮಳೆ: ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ  ಶುಕ್ರವಾರವೂ ಶಾಲೆ– ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹೊಸನಗರ ತಾಲ್ಲೂಕಿನ ಹುಲಿಕಲ್‌ನಲ್ಲಿ ದಾಖಲೆ 15.9 ಸೆಂ.ಮೀ ಮಳೆ ದಾಖಲಾಗಿದೆ.

ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯ ಗರಿಷ್ಠ ಹಂತಕ್ಕೆ ತಲುಪಿದ್ದು, ಶರಾವತಿ ನದಿಗೆ 52,000 ಕ್ಯುಸೆಕ್ ನೀರು ಹರಿಸಲಾಗಿದ್ದು, ಜೋಗ ಜಲಪಾತದ ವೈಭವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯವರೆಗೂ ಭಾರಿ ಮಳೆ ಸುರಿಯಿತು. ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. 

ಕೇರಳದ ವಯನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತಮರಶೆರಿ ಘಾಟ್ ಬಳಿ ಭೂಕುಸಿತ ಉಂಟಾಗಿದೆ. ಹೀಗಾಗಿ, ವಯನಾಡು ಜಿಲ್ಲೆಗೆ ಗುಡಲೂರು ಮಾರ್ಗವಾಗಿ ಹೋಗುವ ವಾಹನಗಳು ಗೋಣಿಕೊಪ್ಪಲು–ಕೂಟುಪುಳ–ಇರಿಟ್ಟಿ ಮೂಲಕ ಸಂಚರಿಸಬೇಕು ಎಂದು ವಯನಾಡು ಜಿಲ್ಲಾಡಳಿತ ಕೋರಿದೆ.

ಭಟ್ಕಳ ತಾಲ್ಲೂಕಿನ ಕೊಪ್ಪ ಗ್ರಾಮದ ಸೇತುವೆ ಶುಕ್ರವಾರ ಜಲಾವೃತಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.