ADVERTISEMENT

Karnataka Rains | ಭಾರಿ ಮಳೆ: ಎಲ್ಲೆ ಮೀರಿ ಹರಿದ ನದಿಗಳು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:46 IST
Last Updated 20 ಆಗಸ್ಟ್ 2025, 5:46 IST
<div class="paragraphs"><p>ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್ ಸಮೀಪದ ಗೋವನಕೊಪ್ಪ ಗ್ರಾಮದ ಬಳಿ ಮಲಪ್ರಭಾ ಹಳೆ ಸೇತುವೆ ಮಂಗಳವಾರ ಮುಳುಗಡೆಯಾಗಿದೆ</p></div>

ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್ ಸಮೀಪದ ಗೋವನಕೊಪ್ಪ ಗ್ರಾಮದ ಬಳಿ ಮಲಪ್ರಭಾ ಹಳೆ ಸೇತುವೆ ಮಂಗಳವಾರ ಮುಳುಗಡೆಯಾಗಿದೆ

   

ಹುಬ್ಬಳ್ಳಿ: ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರವೂ ಭಾರಿ ಮಳೆಯಾಯಿತು. ಬಹುತೇಕ ಕಡೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಬೆಳಗಾವಿ, ಧಾರವಾಡದಲ್ಲಿ ಬುಧವಾರವೂ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಗೋಕಾಕ ಹೊರವಲಯದ ಘಟಪ್ರಭಾ ನದಿಯ ಗೋಕಾಕ– ಶಿಂಗಳಾಪುರ ಸೇತುವೆ ನದಿ ನೀರಿನಲ್ಲಿ ಮುಳುಗಡೆ ಆಗಿದೆ. ಮಾರ್ಕಂಡೇಯ ನದಿಗೆ ನಿರ್ಮಿಸಿದ ಚಿಕ್ಕೋಳಿ ಸೇತುವೆ ಮುಳುಗಲು ಎರಡು ಅಡಿ ಮಾತ್ರ ಬಾಕಿ ಇದೆ.

ADVERTISEMENT

‘ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳಿಂದ ಗೋಕಾಕ ಸಮೀಪದ ಲೋಳಸೂರ ಸೇತುವೆಯಲ್ಲಿ 43 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. 53 ಸಾವಿರ ಕ್ಯೂಸೆಕ್ ನೀರು ಬಂದರೆ ಪ್ರವಾಹ ಉಂಟಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ 30 ಕಾಳಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 53 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಿಲ್ಲೆ ತಲುಪಲು 40 ಗಂಟೆ ಬೇಕು. ಅಲ್ಲದೇ, 2 ಲಕ್ಷ ಕ್ಯೂಸೆಕ್‌ ನೀರು ಬಿಟ್ಟರೆ ಮಾತ್ರ ಜಿಲ್ಲೆಯಲ್ಲಿ ಪ್ರವಾಹ ಆಗುತ್ತದೆ. ಕೃಷ್ಣಾ ನೀರಿನ ಪ್ರಮಾಣ ಹೆಚ್ಚಾದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಆಲಮಟ್ಟಿ ಜಲಾಶಯದಿಂದ 1.5 ಲಕ್ಷ ಕ್ಯೂಸೆಕ್ ನೀರ‌ನ್ನು ಬಿಡುತ್ತಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯ ಎಂಟು ಸೇತುವೆಗಳು ಮುಳುಗಿದ್ದು, ಸಂಚಾರ ಬಂದ್‌ ಆಗಿದೆ. ಹುಕ್ಕೇರಿ ತಾಲ್ಲೂಕಿನ ರಾಜಾ ಲಖಮಗೌಡ ಜಲಾಶಯ ಮತ್ತು ಶಿರೂರ್ ಡ್ಯಾಂ ಪೂರ್ತಿ ಭರ್ತಿಯಾಗಿದ್ದು, ಒಟ್ಟು 41,500 ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಬಿಡಲಾಗುತ್ತಿದೆ.

ಭೂಕುಸಿತ: ಯಲ್ಲಾಪುರ

ತಾಲ್ಲೂಕಿನ→ ಬೀಗಾರ ಸಮೀಪ →ಭೂಕುಸಿತ →ಸಂಭವಿಸಿದೆ.→ ಇದರಿಂದ ತಾರಗಾರ→–ಬೀಗಾರ ಗ್ರಾಮಗಳ ಸಂಪರ್ಕ ರಸ್ತೆ ಕುಸಿಯುವ ಭೀತಿ ಕಾಡುತ್ತಿದೆ. ಸತತ ಮಳೆಯಿಂದ ಕಾಳಿನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದಿಂದ 6 ಕ್ರೆಸ್ಟ್‌ಗೇಟ್‌ಗಳನ್ನು ತೆರೆದು 31 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಹರಿಸಲಾಗಿದೆ. 

ಹೊನ್ನಾವರ ತಾಲ್ಲೂಕಿನ ಉಪ್ಪೋಣಿ, ಸರಳಗಿ ಸೇರಿ ಶರಾವತಿ ನದಿಪಾತ್ರದಲ್ಲಿನ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಗ್ರಾಮಗಳ ಜನರನ್ನು ಸಮೀಪದಲ್ಲಿ ತೆರೆದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜೊಯಿಡಾ ಭಾಗದ ಅಣಶಿ, ಕುಂಬಾರವಾಡಾದಲ್ಲಿ ಕಾಳಿನದಿಯ ಉಪನದಿಗಳಲ್ಲಿ ನೀರು ಉಕ್ಕೇರಿದ್ದರಿಂದ ಹಳ್ಳಿ ರಸ್ತೆಗಳು ಜಲಾವೃತಗೊಂಡಿವೆ.

ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಕಾರಣ ಬಾಗಲಕೋಟೆ ಜಿಲ್ಲೆಯ 11 ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಮಾಚಕನೂರಿನ ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ.ಮಿರ್ಜಿ,  ಚನ್ನಾಳ, ಜಾಲಿಬೇರಿ,  ಜಿರಗಾಳ, ಅಂತಾಪುರ, ಕಸಬಾ ಜಂಬಗಿ, ಆಲಗುಂಡಿ, ತಿಮ್ಮಾಪುರ, ಮುಧೋಳ, ಡವಳೇಶ್ವರ ಹಾಗೂ ಮಾಚಕನೂರ ಬ್ಯಾರೇಜ್‌ ಮುಳುಗಡೆಯಾಗಿವೆ.

ಹೊಸಪೇಟೆಯಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಅಣೆಕಟ್ಟೆಯಿಂದ ಮಂಗಳವಾರ 1.07 ಲಕ್ಷ ಕ್ಯೂಸೆಕ್ ನೀರನ್ನು 26 ಗೇಟ್‌ಗಳ ಮೂಲಕ ನದಿಗೆ ಹರಿಸಲಾಯಿತು. ಹೂವಿನಹಡಗಲಿ ತಾಲ್ಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ, ಹಿರೇಬನ್ನಿಮಟ್ಟಿ, ನಂದಿಗಾವಿ, ಮಕರಬ್ಬಿ, ಕೋಟಿಹಾಳ, ಅಂಗೂರು ಗ್ರಾಮಗಳಲ್ಲಿ 200 ಎಕರೆ ಭತ್ತದ ಗದ್ದೆಗಳು ಮುಳುಗಡೆಯಾಗಿವೆ. ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಶಿವನಯ್ಯನಹಳ್ಳದವರೆಗೂ ನದಿ ನೀರು ಹರಿದುಬಂದಿದ್ದು, ಗರ್ಭಗುಡಿಗೆ ಹೋಗುವ ರಸ್ತೆ ಜಲಾವೃತವಾಗಿದೆ. ಹಂಪಿಯಲ್ಲಿ ವಿರೂಪಾಕ್ಷ ದೇವಸ್ಥಾನ ಸಮೀಪದ ಸ್ನಾನಘಟ್ಟದ ಅನುಷ್ಠಾನ ಮಂಟಪಗಳು ಮುಳುಗಡೆಯಾಗಿವೆ. ಹೂವಿನಹಡಗಲಿ ತಾಲ್ಲೂಕಿನಲ್ಲಿ ಐದು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಗದಗ ಜಿಲ್ಲೆಯಲ್ಲಿ ಮಳೆಯಿಂದ ಹೆಸರು, ಶೇಂಗಾ, ಜೋಳದ ಹೊಲಗಳು ಜಲಾವೃತಗೊಂಡಿವೆ. ನವಿಲುತೀರ್ಥ ಜಲಾಶಯದ ಒಳ ಹರಿವು ಹೆಚ್ಚಾಗಿದೆ.

ಕಡಗರವಳ್ಳಿ ಕುಸಿದ ಶಾಲಾ ಚಾವಣಿ

ಮೈಸೂರು: ಮೈಸೂರು ಭಾಗದ ಕೊಡಗು ಮತ್ತು ಹಾಸನದಲ್ಲಿ ಮಳೆ ನಿಯಂತ್ರಣಕ್ಕೆ ಬಂದರೂ, ನದಿ, ತೊರೆಗಳು ಭೋರ್ಗರೆಯುತ್ತಿವೆ.

ಸಕಲೇಶಪುರ ತಾಲ್ಲೂಕಿನ ಹೆಗ್ಗದ್ದೆ ಬಳಿ ಹೆದ್ದಾರಿ ಪಕ್ಕ ನಿರಂತರ ಭೂಕುಸಿತವಾಗುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿಲ್ಲ. ಕಡಗರ ವಳ್ಳಿಯಲ್ಲಿ ಶಾಲೆಯ ಚಾವಣಿ ಕುಸಿದಿದೆ. ಶಾಲೆಗೆ ರಜೆ ಘೋಷಿಸಿದ್ದರಿಂದ ಅನಾಹುತ ತಪ್ಪಿದೆ. ಅರಕಲಗೂಡು ತಾಲ್ಲೂಕಿನ ವಿವಿಧೆಡೆ 10 ಮನೆಗಳಿಗೆ ಹಾನಿಯಾಗಿದೆ. ನಾಪೋಕ್ಲು ಸಮೀಪದ ಮರಂದೋಡ ಗ್ರಾಮದ ಅನ್ನಾಡಿಯಂಡ ಕುಟುಂಬಸ್ಥರ ಐನ್‌ಮನೆಯ ಒಂದು ಭಾಗ ಸಂಪೂರ್ಣ ಬಿದ್ದಿದೆ.

ಕಾವೇರಿ, ಕಬಿನಿ ಜಲಾಶಯದಿಂದ ನೀರನ್ನು ಹರಿಸಿರುವುದರಿಂದ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನದಿಪಾತ್ರದ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಸತ್ತೇಗಾಲ ಅಗ್ರಹಾರ ಭಾಗದ ರೈತರ ಜಮೀನುಗಳು ಭಾಗಶಃ ಜಲಾವೃತವಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.