
ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಮೊದಲಿಗೆ ಮನೆಯ ದುರಸ್ತಿ ನೆಪ ಹೇಳಿದ್ದ ಸಜಾಬಂದಿ ಈಗ ಅಮ್ಮನ ಆರೋಗ್ಯ ಸರಿ ಇಲ್ಲ ಎಂಬ ಹೊಸ ರಾಗ ಹಾಡುವ ಮೂಲಕ ಪೆರೋಲ್ ಮಂಜೂರಾತಿಗೆ ನಿರ್ದೇಶನ ನೀಡಬೇಕೆಂದು ಕೇಳಿರುವುದು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ಕೊಲೆ ಯತ್ನದ ಆರೋಪಿಯ ಪೆರೋಲ್ ಮನವಿ ತಿರಸ್ಕರಿಸಿದೆ.
ಈ ಸಂಬಂಧ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತುಮಕೂರಿನ ಹೊಸಕೆರೆ ಗ್ರಾಮದ ಎಚ್.ಬಿ.ಹರೀಶ್ ಪತ್ನಿ ಪುಟ್ಟಮ್ಮ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಮನೆ ದುರಸ್ತಿ ಮಾಡಿಸಬೇಕಿದೆ. ಪತ್ನಿ ಒಬ್ಬಳಿಂದಲೇ ಈ ಕೆಲಸ ಸಾಧ್ಯವಿಲ್ಲ. ಹಾಗಾಗಿ, 90 ದಿನಗಳ ಪೆರೋಲ್ ಮಂಜೂರು ಮಾಡಬೇಕು ಎಂದು ಕೋರಿದ್ದ ಹರೀಶ್, 2025ರ ನವೆಂಬರ್ 10ರಂದು ಮೆಮೊ ಸಲ್ಲಿಸಿ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ತಾಯಿಯ ಆರೈಕೆಗೆ ಪೆರೋಲ್ ಮಂಜೂರು ಮಾಡುವಂತೆ ಕೋರಿದ್ದಾರೆ. ಪೆರೋಲ್ ಕಾರಣಗಳನ್ನು ಬದಲಿಸಿರುವ ಅರ್ಜಿದಾರರ ಮನವಿ ವಿಶ್ವಾಸಾರ್ಹವಾಗಿಲ್ಲ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಅರ್ಜಿ ತಿರಸ್ಕರಿಸಿ ಆದೇಶಿಸಿದೆ.
ಕೊಲೆಯತ್ನ ಪ್ರಕರಣದಲ್ಲಿ ಹರೀಶ್‌ಗೆ ತುಮಕೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2012ರ ಆಗಸ್ಟ್ 16ರಂದು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ 2024ರ ಜನವರಿ 22ರಂದು ಎತ್ತಿಹಿಡಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.