ADVERTISEMENT

ವಜಾ ಕಾನೂನು ಬಾಹಿರವಾದರೆ ಬಾಕಿ ವೇತನಕ್ಕೆ ನೌಕರ ಅರ್ಹ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 20:48 IST
Last Updated 6 ಆಗಸ್ಟ್ 2021, 20:48 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ನೌಕರರನ್ನು ವಜಾ ಮಾಡಿದ್ದು ಕಾನೂನು ಬಾಹಿರ ಎಂದಾದರೆ, ಆ ನೌಕರ ಬಾಕಿ ಎಲ್ಲಾ ವೇತನ ಪಡೆಯಲು ಅರ್ಹ’ ಎಂದು ಹೇಳಿರುವ ಹೈಕೋರ್ಟ್, ವಜಾಗೊಂಡಿದ್ದ ಉಪನ್ಯಾಸಕಿಗೆ ಅವರು ಮರಳಿ ಕೆಲಸಕ್ಕೆ ನೇಮಕವಾದ ತನಕದ ಬಾಕಿ ವೇತನ ಪಾವತಿಸಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.

ಮಂಗಳೂರಿನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ, ‘ಬಾಕಿ ವೇತನ ಹಾಗೂ ಇತರ ಸವಲತ್ತು ನಿರಾಕರಿಸುವುದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳ ಉಲ್ಲಂಘನೆ ಆಗಲಿದೆ’ ಎಂದು ಹೇಳಿತು.

2010ರಲ್ಲಿ ಉಪನ್ಯಾಸಕರಾಗಿ ನೇಮಕಗೊಂಡಿದ್ದ ಅರ್ಜಿದಾರರನ್ನು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂಬ ಕಾರಣ ನೀಡಿ 2014ರ ಜೂನ್‌ನಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು(ಕೆಎಸ್‌ಎಟಿ) 2017ರ ಜುಲೈನಲ್ಲಿ ಅರ್ಜಿದಾರರ ಪರ ಆದೇಶ ನೀಡಿತು. ಜೊತೆಗೆ ಎಲ್ಲಾ ಸವಲತ್ತುಗಳನ್ನು ಪಡೆಯಲು ಅರ್ಹರು ಎಂದು ತಿಳಿಸಿತ್ತು.

ADVERTISEMENT

ಆದರೆ, ಬಾಕಿ ವೇತನ ಪಾವತಿಸಲು ನಿರ್ದೇಶನ ಕೋರಿ ಮತ್ತೊಮ್ಮೆ ಮಧ್ಯಂತರ ಅರ್ಜಿಯನ್ನು ಕೆಎಸ್‌ಎಟಿ ಮುಂದೆ ಉಪನ್ಯಾಸಕಿ ಸಲ್ಲಿಸಿದ್ದರು. ಹಲವು ಸುತ್ತಿನ ವಿಚಾರಣೆ ಬಳಿಕ 2020 ಜುಲೈ 30ರಂದು ಅರ್ಜಿಯನ್ನು ನ್ಯಾಯ ಮಂಡಳಿ ತಿರಸ್ಕರಿಸಿತ್ತು.

ಹೈಕೋರ್ಟ್‌ನಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಧಾರವಾಡ ಪೀಠ, ‘ಬಾಕಿ ವೇತನ ಪಡೆಯಲು ಅವರು ಅರ್ಹರು. 8 ವಾರಗಳಲ್ಲಿ ಬಾಕಿ ವೇತನ ಪಾವತಿಸಬೇಕು’ ಎಂದು ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.