ADVERTISEMENT

ಕುಕ್ಕರ್‌ ಕೊಟ್ಟು ಅಣ್ಣಂಗೇ ಮತ ನೀಡಿ ಅಂದ್ರು: ಮುನಿರತ್ನ ಅಕ್ರಮ ಕುರಿತು ವಿಚಾರಣೆ

ಹೈಕೋರ್ಟ್‌ ಕಟಕಟೆಯಲ್ಲಿ ಮುಂದುವರಿದ ಮುನಿರಾಜು ಗೌಡ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 19:18 IST
Last Updated 11 ಏಪ್ರಿಲ್ 2022, 19:18 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ‘ಎಚ್‌ಎಂಟಿ ಲೇ ಔಟ್‌ನ ಸಂದೇಶ್‌ ಎಂಬುವರ ಮನೆಗೆ ಹೋಗಿದ್ದ ಮುನಿರತ್ನ ಅವರ ಬೆಂಬಲಿಗರು, ವೋಟು ಕೇಳಲು ಅಣ್ಣ (ಮುನಿರತ್ನ) ಬಂದಿದ್ದಾರೆ. ಈ ಕುಕ್ಕರ್ ಇಟ್ಕೊಳ್ಳಿ ಮತ್ತು ಅಣ್ಣಂಗೇ ವೋಟು ಕೊಡಿ ಎಂದರು...’

‘ಮುನಿರತ್ನ ಅವರು 15ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸುವಲ್ಲಿ ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿರುವ ಕಾರಣ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅನೂರ್ಜಿತ ಎಂದು ಸಾರಬೇಕು’ ಎಂದು ಕೋರಿ ವಿಧಾನಪರಿಷತ್‌ನ ಬಿಜೆಪಿ ಸದಸ್ಯರೂ ಆಗಿರುವ ಪಿ.ಎಂ.ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ಮೂರನೇ ದಿನದ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರೆಸಿತು.

ಈಗಿನ ಬಿಜೆ‍ಪಿ ಸರ್ಕಾರದಲ್ಲಿ ಸಚಿವರಾಗಿರುವ ಮುನಿರತ್ನ ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪ‍ರ್ಧಿಸಿದ್ದರು. ಅಂದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯಗೊಂಡಿದ್ದ ಪಿ.ಎಂ. ಮುನಿರಾಜು ಗೌಡ, ಹೈಕೋರ್ಟ್‌ನ ಕಟಕಟೆಯಲ್ಲಿ ನಿಂತುಸಾಕ್ಷಿ ನುಡಿದರು.

ADVERTISEMENT

ಅರ್ಜಿದಾರರ ಪರ ವಕೀಲರೂ ಆದ ಎಂ.ಶಿವಪ್ರಕಾಶ್‌ ಅವರ ಪ್ರಶ್ನೆಗಳಿಗೆ ಮುನಿರಾಜು ಗೌಡ ನಿಖರ ದಿನಾಂಕಗಳನ್ನು ಉಲ್ಲೇಖಿಸಿ ಅಂದಿನ ಘಟನೆಗಳನ್ನು ವಿವರಿಸಿದರು. ‘ಮುನಿರತ್ನ (ಮುನಿರತ್ನಂ ಸುಬ್ರಮಣ್ಯ ನಾಯ್ಡು) ಅವರು ತಮ್ಮ ಬೆಂಬಲಿಗರೊಂದಿಗೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಮನೆಗಳಿಗೆ ಖುದ್ದಾಗಿ ತೆರಳಿ ಕುಕ್ಕರ್‌, ಸೀರೆ ಮತ್ತು ವಾಟರ್‌ ಕ್ಯಾನ್‌ಗಳನ್ನು ಹಂಚಿದರು’ ಎಂದರು.

ಇದಕ್ಕೆ ನ್ಯಾಯಪೀಠ,‘ನೀವು ಕೆಲವು ದಿನಾಂಕಗಳನ್ನು ಇಷ್ಟೊಂದು ಕರಾರುವಕ್ಕಾಗಿ ಹೇಗೆ ಹೇಳುತ್ತಿದ್ದೀರಿ’ ಎಂದು ಪ್ರಶ್ನಿಸಿದಾಗ, ಮುನಿರಾಜುಗೌಡ, ‘ನನ್ನ ಜ್ಞಾಪಕಶಕ್ತಿಯ ಆಧಾರದಲ್ಲಿ ಇದನ್ನೆಲ್ಲಾ ಹೇಳುತ್ತಿದ್ದೇನೆ ಮತ್ತು ಹೇಳುವುದನ್ನು ಸಾಕ್ಷ್ಯದ ಮೂಲಕ ಗುರುತಿಸಲೂ ಶಕ್ತನಿದ್ದೇನೆ’ ಎಂದರು.

ಪ್ರತಿಯಾಗಿ ನ್ಯಾಯಪೀಠ, ‘ಮುನಿರತ್ನ ಕುಕ್ಕರ್‌, ಸೀರೆ ಹಂಚಿದ್ದರ ಬಗ್ಗೆ ನೀವು ಸಾಕ್ಷಿ ನುಡಿಯುತ್ತಿದ್ದೀರಿ. ಆದರೆ, ಇದಕ್ಕೆ ಏನು ಸಾಕ್ಷ್ಯ ಒದಗಿಸಿದ್ದೀರಿ’ ಎಂದು ಪ್ರಶ್ನಿಸಿತು. ಇದಕ್ಕೆ ಸ್ಪಷ್ಟನೆ ನೀಡಿದಶಿವಪ್ರಕಾಶ್‌, ‘ಸಾಕ್ಷ್ಯಗಳ ಪಟ್ಟಿ ನೀಡಿಕೆಯಲ್ಲಿ ಈ ಅಂಶ ಸೇರ್ಪಡೆಯಾಗಿಲ್ಲ’ ಎಂದು ಉತ್ತರಿಸಿದರು.

ಇದನ್ನು ಒಪ್ಪದ ನ್ಯಾಯಮೂರ್ತಿಗಳು, ‘ಇದೊಂದು ಅಪರಾಧಿಕ ಅರೆ ನ್ಯಾಯಿಕ ವಿಚಾರಣೆ. ಇಂತಹ ವಿಚಾರಣೆಯಲ್ಲಿ ಸಾಕ್ಷ್ಯ ಕಾಯ್ದೆಯ ಅನ್ವಯವೇ ನೀವು ನಡೆದುಕೊಳ್ಳಬೇಕು. ಸಾಕ್ಷಿ ನುಡಿಯುತ್ತಿರುವ ಸಾಮಗ್ರಿಗಳ ಪಟ್ಟಿ ಮತ್ತು ದಾಖಲೆಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕು’ ಎಂದು ತಾಕೀತು ಮಾಡಿದರು.

ಬೇಕಾದ ಅಧಿಕಾರಿಗಳಿದ್ದರು: ‘ಚುನಾವಣಾ ಅಧಿಸೂಚನೆ ಹೊರಡಿಸಲಾದ 2018ರ ಮಾರ್ಚ್ 27ಕ್ಕೂ ಮುನ್ನವೇ ಮುನಿರತ್ನ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದ ಒಂಬತ್ತು ಪೊಲೀಸ್‌ ಠಾಣೆ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿನ ಚುನಾವಣಾ ಸಿಬ್ಬಂದಿ ಯಾರೆಲ್ಲಾ ತಮ್ಮ ಪರವಾಗಿ ಕೆಲಸ ಮಾಡಬೇಕೊ ಅಂತಹವರನ್ನೆಲ್ಲಾ ಉಳಿಸಿಕೊಳ್ಳುವ ಪೂರ್ವಭಾವಿ ತಯಾರಿ ಮಾಡಿಕೊಂಡಿದ್ದರು’ ಎಂದು ಮುನಿರಾಜುಗೌಡ ಹೇಳಿದರು. ಸಾಕ್ಷಿ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ಏ.12) ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.