ADVERTISEMENT

ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಅಶ್ಲೀಲತೆ ಪ್ರಸರಣಕ್ಕೆ ಹೈಕೋರ್ಟ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 15:11 IST
Last Updated 30 ಜನವರಿ 2026, 15:11 IST

ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)

ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)

ADVERTISEMENT

ಬೆಂಗಳೂರು: ‘ಭಜರಂಗಿ ಗೋ ಕಳ್ಳರು’ ಹೆಸರಿನಲ್ಲಿ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿ ಅದರಲ್ಲಿ, ಹಿಂದೂ ದೇವತೆಗಳನ್ನು ಮತ್ತು ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಡಿಯ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್‌, ‘ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲವನ್ನೂ ಸಹಿಸಲಾಗುವುದಿಲ್ಲ’ ಎಂದು ಕಿಡಿ ಕಾರಿದೆ.

‘ನನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕುಪ್ಪೆಟ್ಟಿ ಕರಾಯ ಗ್ರಾಮದ ಸಿರಾಜುದ್ದೀನ್‌ ಬಿನ್‌ ಮೊಹಮದ್‌ ಇಸ್ಮಾಯಿಲ್‌ (30) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಾಮರಸ್ಯ ಭಂಗಗೊಳಿಸುವ ಪ್ರವೃತ್ತಿ ಕಂಡು ಬರುತ್ತಿದೆ. ತನಿಖಾಧಿಕಾರಿಯು ಗ್ರೂಪ್‌ನ ಎಲ್ಲಾ ನಿರ್ವಾಹಕರ ವಿರುದ್ಧ ಏಕರೂಪವಾಗಿ ಮುಂದುವರಿಯಲು ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.

‘ಗ್ರೂಪ್‌ನ ವ್ಯಾಪ್ತಿ ಮತ್ತು ಅದರ ಅಡ್ಮಿನ್‌ ಹೊಣೆಗಾರಿಕೆಗಳೆಲ್ಲವೂ ನೇರವಾಗಿ ಡೊಮೇನ್‌ಗೆ ಸೇರುವ ವಿಷಯಗಳಾಗಿವೆ. ಹಾಗಾಗಿ, ಇಂತಹ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳ ಸದಸ್ಯರು ಅಶ್ಲೀಲ ಚಿತ್ರಗಳ ಪ್ರಸರಣಕ್ಕೆ ಅವಕಾಶ ನೀಡುವ ಕುಕೃತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆ, ಅವರನ್ನೂ ವಿಚಾರಣೆಗೆ ಒಳಪಡಿಸಬೇಕು. ಆದಾಗ್ಯೂ, ತನಿಖಾ ಹಂತದಲ್ಲಿ ಈ ಕೋರ್ಟ್‌ ಯಾವುದೇ ಹೆಚ್ಚಿನ ಅವಲೋಕನ ಮಾಡುವುದು ಅನಗತ್ಯ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಈ ರೀತಿಯ ಗುರುತರ ಗುಣಲಕ್ಷಣಗಳ ಅಪರಾಧದ ತನಿಖೆಯನ್ನು ಮಧ್ಯದಲ್ಲೇ ತಡೆಯಲು ಸಾಧ್ಯವಿಲ್ಲ. ಅಂತೆಯೇ, ಅಪರಾಧವು ಐದು ವರ್ಷಗಳಷ್ಟು ಹಳೆಯದಾಗಿರುವ ಕಾರಣ ತನಿಖಾಧಿಕಾರಿ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ತನಿಖೆಯನ್ನು ಸಾಧ್ಯವಾದಷ್ಟು ಬೇಗ ಮುಕ್ತಾಯಗೊಳಿಸಬೇಕು’ ಎಂದು ಪ್ರಾಸಿಕ್ಯೂಷನ್‌ಗೆ ತಾಕೀತು ಮಾಡಿದೆ.

ಪ್ರಕರಣವೇನು?: ‘ಆರೋಪಿ ಸಿರಾಜುದ್ದೀನ್‌ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಅಶ್ಲೀಲವಾಗಿ, ಅವಮಾನಕರ ಮತ್ತು ಅಪವಿತ್ರ ರೀತಿಯಲ್ಲಿ ಚಿತ್ರಿಸಿ ಪ್ರಸಾರ ಮಾಡುತ್ತಿದ್ದಾರೆ. ಈ ರೀತಿಯ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳು ಸಮಾಜದಲ್ಲಿ ಗಲಭೆ ಸೃಷ್ವಿಸುವ ಷಡ್ಯಂತ್ರ ಹೊಂದಿವೆ. ಕೋಮು ಹಿಂಸಾಚಾರ ಈ ಗ್ರೂಪ್‌ಗಳ ಗುರಿಯಾಗಿದೆ. ಆದ್ದರಿಂದ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಬೆಳ್ತಂಗಡಿಯ ಕಡಿರುದ್ಯಾವರ ಗ್ರಾಮದ ಕೆ.ಜಯರಾಜ್ ಸಾಲಿಯಾನ 2020ರ ಜನವರಿ 25ರಂದು ಸೆನ್‌ (ಸೈಬರ್, ಎಕನಾಮಿಕ್‌ ಅಂಡ್‌ ನಾರ್ಕೊಟಿಕ್‌ ಕ್ರೈಂ) ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಅನ್ವಯ ಮಂಗಳೂರು ಪೊಲೀಸರು, ಭಾರತೀಯ ದಂಡ ಸಂಹಿತೆ–1860ರ ಕಲಂ 295(ಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 67ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ‘ಎಫ್‌ಐಆರ್‌ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಐಪಿಸಿ ಕಲಂ 295 ಮತ್ತು ಐಟಿ ಕಲಂ 67 ಹೇಳುವುದೇನು?

* ಐಪಿಸಿ 295 (ಎ): ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರ್ವಕವಾಗಿ ಅವಮಾನಿಸುವ ಮೂಲಕ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೃತ್ಯಗಳನ್ನು ಶಿಕ್ಷಿಸುತ್ತದೆ. ಇದು ದ್ವೇಷ ಭಾಷಣದ ಕಠಿಣ ಕಾನೂನಾಗಿದ್ದು ಅಪರಾಧಿಗಳಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ದಂಡ ಅಥವಾ ಎರಡನ್ನೂ ವಿಧಿಸಬಹುದು.

* ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ವಿಷಯ ಪ್ರಸಾರ ಮಾಡುವುದನ್ನು ತಡೆಯಲು ಬಳಸಲಾಗುವ ಪ್ರಮುಖ ಕಾನೂನು ಎನಿಸಿದ ಐಟಿ ಕಾಯ್ದೆಯ ಕಲಂ 67, ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಿಷಯಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ. ಈ ಅಪರಾಧಕ್ಕೆ 3 ವರ್ಷಗಳ ಜೈಲು ಶಿಕ್ಷೆ ಮತ್ತು ₹5 ಲಕ್ಷ ದಂಡ ವಿಧಿಸಲಾಗುತ್ತದೆ. ಇದನ್ನೇ ಪುನರಾವರ್ತಿಸಿದರೆ 5 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಲಾಗುತ್ತದೆ. ಇದೇ ಕಾಯ್ದೆಯ ಕಲಂ 67ಎ ಮತ್ತು 67ಬಿ ಮಕ್ಕಳ ಲೈಂಗಿಕ ಮತ್ತು ಅಶ್ಲೀತೆಗೆ ಅನ್ವಯವಾಗುತ್ತದೆ.

ಸಂವಿಧಾನದ 25 ಮತ್ತು 26ನೇ ವಿಧಿಗಳ ಮೂಲಕ ಖಾತರಿಪಡಿಸಲಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಯಾವತ್ತೂ ಮರೆಯಬಾರದು.
ನ್ಯಾ.ಎಂ.ನಾಗಪ್ರಸನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.