ADVERTISEMENT

ರಾಹುಲ್‌ ಗಾಂಧಿ ವಿರುದ್ಧ ಟ್ವೀಟ್‌: ಮಾಳವೀಯ ವಿಚಾರಣೆಗೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 22:30 IST
Last Updated 19 ಜುಲೈ 2023, 22:30 IST
ಬಿಜೆಪಿ ನಾಯಕ ಅಮಿತ್ ಮಾಳವೀಯ
ಬಿಜೆಪಿ ನಾಯಕ ಅಮಿತ್ ಮಾಳವೀಯ   

ಬೆಂಗಳೂರು: ‘ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಸಮಾಜದಲ್ಲಿ ದ್ವೇಷ ಬಿತ್ತುವ ಮತ್ತು ವೈರತ್ವ ಉಂಟು ಮಾಡುವಂತಹ ಟ್ವೀಟ್‌ ಮಾಡಿದ್ದಾರೆ‘ ಎಂದು ಆರೋಪಿಸಿ ಬಿಜೆಪಿ ಐಟಿ ಸೆಲ್‌ ಉಸ್ತುವಾರಿ ಅಮಿತ್‌ ಮಾಳವೀಯ ವಿರುದ್ಧ ನಗರದ 8ನೇ ಹೆಚ್ಚುವರಿ ಚೀಫ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಸಿಎಂಎಂ) ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಅಮಿತ್‌ ಮಾಳವೀಯ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ಮಾಡಿತು.

ಅಮಿತ್ ಮಾಳವೀಯ ಪರ ಹಾಜರಾಗಿ ವಾದ ಮಂಡಿಸಿದ ಹೈಕೋರ್ಟ್‌ ವಕೀಲರೂ ಆದ ಸಂಸದ ತೇಜಸ್ವಿ ಸೂರ್ಯ ಅವರು, ‘ಮಾಳವೀಯ ಅವರು ತಮ್ಮ ಸ್ವಂತ ಖಾತೆಯಿಂದ ಟ್ವೀಟ್‌ ಮಾಡಿದ್ದಾರೆ ಮತ್ತು ಇದರಲ್ಲಿ ಯಾವುದೇ ದ್ವೇಷ ಬಿತ್ತುವ ಅಥವಾ ವೈರತ್ವ ಉಂಟು ಮಾಡುವ ಅವಹೇಳನಕಾರಿ ಅಂಶಗಳಿಲ್ಲ‘ ಎಂದು ನ್ಯಾಯಪೀಠಕ್ಕೆ ಮನದಟ್ಟು ಮಾಡಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌–1 ಬಿ.ಎ.ಬೆಳ್ಳಿಯಪ್ಪ, ‘ಮಾಳವೀಯ ಅವರು ಟ್ವೀಟ್‌ ಮಾಡಿರುವ ವಿಡಿಯೊದಲ್ಲಿ ಇಸ್ಲಾಮಿಕ್‌ ನಂಬುಗೆಯ ಜನರೊಂದಿಗೆ ರಾಹುಲ್‌ ಗಾಂಧಿಯವರನ್ನು ತಪ್ಪಾಗಿ ನಿರೂಪಿಸಲಾಗಿದೆ. ಅವಹೇಳನಕಾರಿ ಚಿತ್ರಣವು ನಿಸ್ಸಂದೇಹವಾಗಿ ವಿವಿಧ ವರ್ಗಗಳ ಮಧ್ಯೆ ದ್ವೇಷವನ್ನು ಬಿತ್ತುತ್ತದೆ ಮತ್ತು ಕೋಮು ಸೌಹಾರ್ದವನ್ನು ಹಾಳು ಮಾಡುತ್ತದೆ‘ ಎಂದು ಆರೋಪಿಸಿದರು.

ಇದಕ್ಕೆ ನ್ಯಾಯಮೂರ್ತಿಗಳು, ’ಸಿದ್ಧಾಂತಗಳು ಯಾವಾಗ ಮತೀಯವಾದವು‘ ಎಂದು ಕುಟುಕಿದರಲ್ಲದೆ, ವಿಚಾರಣಾ ನ್ಯಾಯಾಲಯದಲ್ಲಿರುವ ಪ್ರಕರಣದ ಮುಂದಿನ ಪ್ರಕ್ರಿಯೆಗೆ ತಡೆ ನೀಡಿ ಆದೇಶಿಸಿದರು. ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ‘ಅಮಿತ್‌ ಮಾಳವೀಯ ಮಾಡಿರುವ ಟ್ವೀಟ್‌ ರಾಹುಲ್‌ ಗಾಂಧಿ ಹಾಗೂ ಹಿರಿಯ ನಾಯಕರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿದೆ. ಸಮಾಜಕ್ಕೆ ತಪ್ಪು ಸಂದೇಶ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸುವಲ್ಲಿ ಒಳಸಂಚನ್ನು ಮಾಡಲಾಗಿದ್ದು, ಅಮಿತ್‌ ಮಾಳವೀಯ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು‘ ಎಂದು ಕೆಪಿಸಿಸಿ ಸದಸ್ಯ ರಮೇಶ್‌ ಬಾಬು 2023ರ ಜೂನ್‌ 27ರಂದು ಹೈಗ್ರೌಂಡ್ಸ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಪೊಲೀಸರು, ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 505 (2), 153 ಎ, 120 ಬಿ ಮತ್ತು 34ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಈ ಕುರಿತಂತೆ 8ನೇ ಹೆಚ್ಚುವರಿ ಸಿಎಂಎಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.