
ಹೈಕೋರ್ಟ್ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್ ಉದ್ಯೋಗಿ ಶ್ರೀಧರ್ ಸಾವಿನ ಪ್ರಕರಣದ ಮರು ತನಿಖೆಗೆ ಆದೇಶ ಹೊರಡಿಸಿ ಐದು ತಿಂಗಳು ಕಳೆದರೂ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸದೇ ಇರುವ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ಸಾರಾ ಫಾರ್ಮ್ಸ್ ಮ್ಯಾನೇಜರ್ ಹರೀಶ್ ಮುಗರೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಯ ಖುದ್ದು ಹಾಜರಾತಿಗೆ ನಿರ್ದೇಶಿಸಿದೆ.
‘ಶ್ರೀಧರ್ ಸಾವಿನ ಪ್ರಕರಣದ ಮರು ತನಿಖೆ ನಡೆಸಲು ರಾಜ್ಯ ಸರ್ಕಾರ ನಾಲ್ಕು ವಾರಗಳಲ್ಲಿ ಎಸ್ಐಟಿ ರಚನೆ ಮಾಡಬೇಕು. ತನಿಖೆ ಆರಂಭಿಸಿದ ದಿನದಿಂದ ನಾಲ್ಕು ತಿಂಗಳಲ್ಲಿ ಸಂಬಂಧಿಸಿದ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು’ ಎಂದು ಹೈಕೋರ್ಟ್, 2025ರ ಸೆಪ್ಟೆಂಬರ್ 9ರಂದು ಆದೇಶಿಸಿತ್ತು.
ವಿಚಾರಣೆ ವೇಳೆ, ‘ಈತನಕ ಎಸ್ಐಟಿ ರಚನೆಯಾಗಿಲ್ಲ’ ಎಂಬ ಅರ್ಜಿದಾರರ ಪರ ವಕೀಲರ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ‘ಈ ಕುರಿತಂತೆ ವಿವರಣೆ ನೀಡಲು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಶನಿವಾರ (ಫೆ.21) ಮಧ್ಯಾಹ್ನ 2.30ಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ತಾಕೀತು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.