ADVERTISEMENT

ವಿಧಾನಪರಿಷತ್‌ ಸದಸ್ಯರ ವೈದ್ಯಕೀಯ ವೆಚ್ಚ: 3 ವರ್ಷದಲ್ಲಿ ₹1.31 ಕೋಟಿ

ಪರಿಷತ್‌: ರುದ್ರೇಗೌಡ ₹23 ಲಕ್ಷ, ಶರವಣ ₹12 ಲಕ್ಷ ವೈದ್ಯಕೀಯ ವೆಚ್ಚ

ರಾಜೇಶ್ ರೈ ಚಟ್ಲ
Published 5 ಅಕ್ಟೋಬರ್ 2021, 20:27 IST
Last Updated 5 ಅಕ್ಟೋಬರ್ 2021, 20:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಮೂರು ವರ್ಷಗಳಲ್ಲಿ (2019ರಿಂದ 2021ರ ಸೆಪ್ಟೆಂಬರ್‌ ವರೆಗೆ) ವಿಧಾನಪರಿಷತ್‌ ಸದಸ್ಯರ ವೈದ್ಯಕೀಯ ವೆಚ್ಚಕ್ಕೆ ಸರ್ಕಾರದ ಬೊಕ್ಕಸದಿಂದ ₹ 1,30,73,084 ಮರು ಪಾವತಿ ಆಗಿದೆ.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕು ತಗಲಿದ ಕಾರಣಕ್ಕೆ ನಾಲ್ವರು ಸದಸ್ಯರು ಮತ್ತು ಅವರ ಪತ್ನಿ ಹಾಗೂ ಇತರ ನಾಲ್ವರು ಸದಸ್ಯರು ತಮ್ಮ ಚಿಕಿತ್ಸೆಗೆ ಸಂಬಂಧಿಸಿದಂತೆ ₹ 26,00,267 ಕ್ಲೇಮ್ ಮಾಡಲಾಗಿದೆ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಈ ವೆಚ್ಚವನ್ನು ದೃಢೀಕರಿಸಿದ್ದು, ಸದಸ್ಯರಿಗೆ ಹಣವನ್ನು ಮರು ಪಾವತಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಎಚ್‌.ಎಂ. ವೆಂಕಟೇಶ್‌ ಎಂಬವರು ವಿಧಾನ ಪರಿಷತ್‌ ಸಚಿವಾಲಯದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿ ಪಡೆದುಕೊಂಡಿದ್ದಾರೆ.

ADVERTISEMENT

ಹಲವು ಸದಸ್ಯರು ಒಂದೇ ವರ್ಷ3–4 ಬಾರಿ ಪ್ರತ್ಯೇಕ, ಪ್ರತ್ಯೇಕ ವೈದ್ಯಕೀಯ ಬಿಲ್‌ಗಳನ್ನು ಸಲ್ಲಿಸಿ ಹಣ ಕ್ಲೇಮ್‌ ಮಾಡಿಕೊಂಡಿದ್ದಾರೆ. 6–7 ಬಾರಿ ಕ್ಲೇಮ್‌ ಮಾಡಿಕೊಂಡ ಸದಸ್ಯರೂ ಇದ್ದಾರೆ.

ಪರಿಷತ್‌ ಸಚಿವಾಲಯ ನೀಡಿದ ದಾಖಲೆಗಳ ಪ್ರಕಾರ, 2020ರಲ್ಲಿ ಒಂದೇ ಬಾರಿಗೆ ಅತೀ ಹೆಚ್ಚು ವೈದ್ಯಕೀಯ ವೆಚ್ಚವನ್ನು ಬಿಜೆಪಿಯ ಎಸ್‌. ರುದ್ರೇಗೌಡ ಅವರು ನ. 4ರಂದು ₹ 8,09,948 ಮರು ಪಾವತಿಸಿಕೊಂಡಿದ್ದಾರೆ. ಅಲ್ಲದೆ ಅವರು, ಅದೇ ವರ್ಷ ಜೂನ್ 26ರಂದು ₹ 34,523, ಆಗಸ್ಟ್‌ 17ರಂದು ₹ 5,73,175 ಕ್ಲೇಮ್‌ ಮಾಡಿಕೊಂಡಿದ್ದಾರೆ. 2021ರ ಏಪ್ರಿಲ್‌ 18ರಂದು ರುದ್ರೇಗೌಡ ಮತ್ತೆ ₹ 8,67,034 ವೈದ್ಯಕೀಯ ವೆಚ್ಚ ಪಡೆದುಕೊಂಡಿದ್ದಾರೆ. ಅಲ್ಲದೆ, ಅದಕ್ಕೂ ಮೊದಲು 2019ರಲ್ಲಿ ಒಮ್ಮೆ ₹ 8,016 ಮತ್ತೊಮ್ಮೆ ₹ 9,842 ಕ್ಲೇಮ್‌ ಮಾಡಿಕೊಂಡಿದ್ದು, ಹೀಗೆ ಮೂರು ವರ್ಷಗಳ ಅವಧಿಯಲ್ಲಿ ಅವರು ಒಟ್ಟು ₹ 23,02,538 ಮೊತ್ತ ಕ್ಲೇಮ್‌ ಮಾಡಿದ್ದಾರೆ.

ಪರಿಷತ್‌ ಸದಸ್ಯರಾಗಿದ್ದ ಜೆಡಿಎಸ್‌ನ ಟಿ.ಎ. ಶರವಣ ಅವರು ಎರಡು ವರ್ಷಗಳಲ್ಲಿ ಒಟ್ಟು ₹ 12.07 ಲಕ್ಷ ವೈದ್ಯಕೀಯ ವೆಚ್ಚ ಮರು ಪಾವತಿಸಿಕೊಂಡಿದ್ದಾರೆ. ಅವರು 2019ರಲ್ಲಿ ಸೆ. 27ರಂದು ₹ 1.23,429 ಹಾಗೂ ಅ. 24ರಂದು ಮತ್ತೆ ₹ 7,04,797 ಸೇರಿ, ಆ ವರ್ಷ ಬೇರೆ ದಿನಗಳಲ್ಲಿ ಐದು ಬಾರಿ ಮತ್ತು 2020ರಲ್ಲಿ ಬೇರೆ ಬೇರೆ ದಿನಗಳಲ್ಲಿ ಆರು ಬಾರಿ ಸೇರಿ ಒಟ್ಟು 11 ಬಾರಿ ಈ ಒಟ್ಟು ಮೊತ್ತವನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ.

2019ರಲ್ಲಿ ಒಂದೇ ಬಾರಿ (ಜೂನ್‌ 1ರಂದು ಅತೀ ಹೆಚ್ಚು ವೈದ್ಯಕೀಯ ವೆಚ್ಚ ₹ 8,29,836 ಕಾಂಗ್ರೆಸ್‌ ಸದಸ್ಯ ಎಚ್‌.ಎಂ. ರೇವಣ್ಣ ಪಡೆದುಕೊಂಡಿದ್ದಾರೆ. ಅಲ್ಲದೆ, ಅದೇ ವರ್ಷ ಮೇ 21ರಂದು ಅವರು ₹ 1,35,581 ಮರು ಪಾವತಿಸಿಕೊಂಡಿದ್ದಾರೆ. 2020ರಲ್ಲಿ ಜೂನ್‌ 26ರಂದು ರೇವಣ್ಣ ಮತ್ತೆ ₹ 1,20,420 ಸೇರಿ ಎರಡು ವರ್ಷಗಳಲ್ಲಿ ₹ 10,85,737 ಕ್ಲೇಮ್‌ ಮಾಡಿಕೊಂಡಿದ್ದಾರೆ.

‘ಇಷ್ಟೆಲ್ಲ ಆರೋಗ್ಯ ಸಮಸ್ಯೆ ಇರುವವರು ಆಸ್ಪತ್ರೆಯಲ್ಲೇ ಇರಬೇಕು. ಆದರೆ, ಇವರೆಲ್ಲ ವಿಧಾನ ಪರಿಷತ್‌ ಕಲಾಪಕ್ಕೆ, ಇತರ ಕಾರ್ಯಕ್ರಮಗಳಿಗೆ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಾರಲ್ಲ. ವೈದ್ಯಕೀಯ ವೆಚ್ಚ ಕ್ಲೇಮ್‌ ನಿಯಮಗಳಿಗೆ ತಿದ್ದುಪಡಿ ಆಗಬೇಕು’ ಎಂದೂ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.