ADVERTISEMENT

ಆನಂದ ಸಿಂಗ್ – ಕಂಪ್ಲಿ ಗಣೇಶ್ ಹೊಡೆದಾಟ ಪ್ರಕರಣ ರಾಜಿ ಸಂಧಾನದಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 15:36 IST
Last Updated 4 ಅಕ್ಟೋಬರ್ 2021, 15:36 IST
ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ ಮತ್ತು ಆನಂದ ಸಿಂಗ್‌
ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ ಮತ್ತು ಆನಂದ ಸಿಂಗ್‌   

ಬೆಂಗಳೂರು: ಎರಡು ವರ್ಷಗಳ ಹಿಂದೆ ರೆಸಾರ್ಟ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡು ಕೋರ್ಟ್‌ ಮೆಟ್ಟಿಲೇರಿದ್ದ ವಿಜಯನಗರ ಕ್ಷೇತ್ರದ ಶಾಸಕ, ಸಚಿವ ಆನಂದ ಸಿಂಗ್‌ ಮತ್ತು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್‌ ಮಧ್ಯದ ಪ್ರಕರಣ ಪರಸ್ಪರ ರಾಜಿ ಸಂಧಾನದಲ್ಲಿ ಅಂತ್ಯಗೊಂಡಿದೆ.

ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಕಂಪ್ಲಿ ಗಣೇಶ್ ಸಲ್ಲಿಸಿದ್ದ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪುರಸ್ಕರಿಸಿದೆ.

ಕಂಪ್ಲಿ ಗಣೇಶ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ, ’ಈ ಪ್ರಕರಣದಲ್ಲಿ ಕೊಲೆ (ಕಲಂ 307) ಯತ್ನದ ಉದ್ದೇಶ ಕಂಡು ಬರುತ್ತಿಲ್ಲ. ಇದು ಆ ಕ್ಷಣಕ್ಕೆ ಘಟಿಸಿದ್ದಾಗಿದೆ. ಈ ಕುರಿತ ವೈದ್ಯಕೀಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ, ಸಾಕ್ಷ್ಯಗಳೂ ಇದನ್ನೇ ದೃಢಪಡಿಸುತ್ತಿವೆ. ಆದ್ದರಿಂದ ಪ್ರಕರಣ ರದ್ದುಗೊಳಿಸಬೇಕು‘ ಎಂದು ಕೋರಿದರು.

ADVERTISEMENT

‘ಕೊಲೆ ಯತ್ನ ಆರೋಪ ಇದ್ದ ಕಾರಣ ರಾಜಿ ಸಂಧಾನ ಸಾಧ್ಯವಾಗಿರಲಿಲ್ಲ. ಇದು ಕೇವಲ ಹಣಕಾಸಿನ ವಿಚಾರವಾಗಿ ನಡೆದಿದ್ದ ಜಗಳವಾಗಿತ್ತು. ಈಗಾಗಲೇ ಆರೋಪಿ ಮತ್ತು ದೂರುದಾರರು ರಾಜಿ ಮಾಡಿಕೊಳ್ಳಲು ಒಪ್ಪಿರುವುದರಿಂದ ಕಲಂ 307 ಅನ್ವಯವಾಗುವುದಿಲ್ಲ‘ ಎಂಬ ಅಂಶಗಳನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಇದನ್ನು ಮನ್ನಿಸಿದ ನ್ಯಾಯಪೀಠ, ಶಾಸಕ ಗಣೇಶ್ ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.

ಹಿನ್ನೆಲೆ: 2019 ಜನವರಿ 19ರ ರಾತ್ರಿ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆನಂದ್ ಸಿಂಗ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆನಂದ್ ಸಿಂಗ್ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಗಣೇಶ್ ವಿರುದ್ಧ ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಡಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಸಂಬಂಧ ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.