ಆರ್. ಅಶೋಕ
ಬೆಳಗಾವಿ: 'ರಾಜ್ಯ ಸರ್ಕಾರ ಈಗ ಕುಂಭಕರ್ಣ ನಿದ್ರೆಯಲ್ಲಿದೆ. ಇದಕ್ಕೆ ಮಳೆ ಬರುವುದು ಗೊತ್ತಾಗುವುದಿಲ್ಲ. ಬರ ಪರಿಸ್ಥಿತಿ ಅರಿವು ಇಲ್ಲ. ಜನರ ಕಷ್ಟ ಅರಿಯದ ದುಷ್ಟ ಸರ್ಕಾರ ಇದು' ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದರು.
ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನೆರೆ ಮತ್ತು ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರು ದಸರಾ ಆಚರಿಸಲಾಗದೆ ಬೀದಿಗೆ ಬಂದಿದ್ದಾರೆ. ಆದರೆ, ಸರ್ಕಾರಕ್ಕೆ ಸಂತ್ರಸ್ತರ ಸಂಕಷ್ಟಕ್ಕಿಂತ, ಜಾತಿ ಒಂದೇ ಬೇಕಾಗಿದೆ' ಎಂದು ದೂರಿದರು.
'ರಾಜ್ಯ ಸರ್ಕಾರ ಈಗ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಈಗ ಬೆಂಕಿ ಸಿದ್ದರಾಮಯ್ಯ ಆಗಿದ್ದಾರೆ' ಎಂದು ಆರೋಪಿಸಿದರು.
'ಮಲೆನಾಡು ಭಾಗದಲ್ಲಿ ಕಳೆದೊಂದು ತಿಂಗಳಿನಿಂದ ಗುಡ್ಡ ಕುಸಿತವಾಗಿದೆ. ರಸ್ತೆಗಳೆಲ್ಲ ಹಾಳಾಗಿವೆ. ನೆರೆ ಹಾನಿ ಪರಿಶೀಲನೆಗೆ ಬಿಜೆಪಿಯವರು ಪ್ರವಾಸ ಘೋಷಿಸಿದ ನಂತರ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎಂಬ ಮಾಮೂಲಿ ಡೈಲಾಗ್ ಹೊಡೆಯುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.
'ಕಳೆದ 20 ವರ್ಷಗಳಿಂದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ನೀವು ಮಳೆ ಹಾನಿ ವರದಿ ಪಡೆದು ಕೇಂದ್ರಕ್ಕೆ ಕಳುಹಿಸಬೇಕು. ಆದರೆ, ಅವರಿಗೆ ಈ ಮಾಹಿತಿಯೇ ಇಲ್ಲ. ಯಾವ ಸಚಿವರೂ ನಮ್ಮಂತೆ ತಂಡ ರಚಿಸಿಕೊಂಡು ಹಾನಿ ಅವೀಕ್ಷಿಸಲು ಹೋಗಿಲ್ಲ' ಎಂದು ಆರೋಪಿಸಿದರು.
'ಸಿ.ಎಂ ಸಭೆ ಕರೆದು, ಮಳೆಯಿಂದ ಆಗಿರುವ ಹಾನಿ ಪರಿಶೀಲನೆ, ಪರಿಹಾರ ವಿತರಣೆ ಟಾಸ್ಕ್ ಅನ್ನು ಸಚಿವರಿಗೆ ಕೊಡಬೇಕಿತ್ತು. ಆಗ ಈ ಅನಾಹುತ ಆಗುತ್ತಿರಲಿಲ್ಲ' ಎಂದು ಹೇಳಿದರು.
'ನಾನು ಎಷ್ಟುದಿನ ಮುಖ್ಯಮಂತ್ರಿ ಎಂಬುದನ್ನೇ ಸಿದ್ದರಾಮಯ್ಯ ಹೇಳುತ್ತಿದ್ದಾರೆಯೇ ಹೊರತು, ಮಳೆ ಹಾನಿ ಪ್ರಮಾಣ ಹೇಳುತ್ತಿಲ್ಲ. ಮನೆ ಬಿದ್ದ ಬಗ್ಗೆ ಮಾತನಾಡುತ್ತಿಲ್ಲ. ಬೆಳೆ ಹಾನಿ ಬಗ್ಗೆ ಅಂಕಿ -ಸಂಖ್ಯೆಯೂ ಇಲ್ಲ' ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.