ADVERTISEMENT

ಪಾಲಿಕೆಗಳ ನೌಕರರ ಬೇಡಿಕೆ ಈಡೇರಿಕೆ: ಮುಷ್ಕರ ವಾಪಸ್‌

ಸಚಿವ ಸುರೇಶ್‌ ಸಂಧಾನ ಸಭೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 15:38 IST
Last Updated 15 ಜುಲೈ 2025, 15:38 IST
ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಪದಾಧಿಕಾರಿಗಳು ಬಿ.ಎಸ್. ಸುರೇಶ್‌ ಅವರನ್ನು ಸನ್ಮಾನಿಸಿದರು
ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಪದಾಧಿಕಾರಿಗಳು ಬಿ.ಎಸ್. ಸುರೇಶ್‌ ಅವರನ್ನು ಸನ್ಮಾನಿಸಿದರು   

ಬೆಂಗಳೂರು: ರಾಜ್ಯದ 10 ನಗರ ಪಾಲಿಕೆಗಳ ನೌಕರರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದಾಗಿ ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್‌ ಅವರು ಹೇಳಿದರು.

ರಾಜ್ಯ ಮಹಾನಗರ ಪಾಲಿಕೆಗಳ ಸಂಘದ ಪದಾಧಿಕಾರಿಗಳೊಂದಿಗೆ ಸಚಿವರು ಮಂಗಳವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ನೌಕರರು ಜುಲೈ 8ರಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್‌ ಪಡೆದರು.

ಮಹಾನಗರ ಪಾಲಿಕೆಗಳ ಸಾಮಾನ್ಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೌಕರರನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸುವುದು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ), ಸಮೂಹ ವಿಮೆ ಯೋಜನೆ (ಜಿಐಎಸ್) ಮತ್ತು ಸಮೂಹ ಭವಿಷ್ಯ ನಿಧಿ (ಜಿಪಿಎಫ್) ಸೌಲಭ್ಯಗಳನ್ನು ನೀಡಬೇಕು ಎಂಬ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು, ಎಲ್ಲವನ್ನೂ ಈಡೇರಿಸುವುದಾಗಿ ಭರವಸೆ ನೀಡಿದರು.

ADVERTISEMENT

ಪಾಲಿಕೆ ನೌಕರರಿಗೆ ಸಕಾಲಕ್ಕೆ ವೇತನ ನೀಡುವುದು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಆರ್ಥಿಕ ಇಲಾಖೆ ಅನುಮೋದನೆ ಪಡೆಯುವಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು.

‘ಪೌರಾಡಳಿತ ಆಯುಕ್ತರ ಹುದ್ದೆ ಸೃಜಿಸಲು ಆರ್ಥಿಕ ಇಲಾಖೆ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ. ಮಹಾನಗರ ಪಾಲಿಕೆಗಳಲ್ಲಿ ಪರಿಸರ ಎಂಜಿನಿಯರ್‌ಗಳ ಹುದ್ದೆ ಭರ್ತಿಗೆ ಅನುಮೋದನೆ ಪಡೆಯಲಾಗುತ್ತದೆ. ಸರ್ಕಾರಿ ನೌಕರರ ಮಾದರಿಯಲ್ಲಿ ಪಾಲಿಕೆ ನೌಕರರಿಗೂ ಜಿಐಎಸ್ ಜಾರಿಗೆ ತರಲಾಗುತ್ತದೆ’ ಎಂದು ಸುರೇಶ್‌ ತಿಳಿಸಿದರು.

‘ಜ್ಯೋತಿ ಸಂಜೀವಿನಿ’ ಆರೋಗ್ಯ ವಿಮೆಯನ್ನು ಪಾಲಿಕೆ ನೌಕರರಿಗೂ ವಿಸ್ತರಣೆ ಮಾಡಲಾಗುತ್ತದೆ. ಈ ಯೋಜನೆಯಡಿ ನೌಕರರು ತಮ್ಮ ಪಾಲಿನ ವಿಮಾ ಮೊತ್ತ ಮತ್ತು ಅದಕ್ಕೆ ಸಮಾನವಾದ ಮೊತ್ತವನ್ನು ಪಾಲಿಕೆಗಳು ಭರಿಸುವ ಸಾಧಕ-ಭಾದಕಗಳ ಬಗ್ಗೆ ಪರಿಶೀಲಿಸಲಾಗುತ್ತದೆ. ನೌಕರರ ಚಿಕಿತ್ಸಾ ವೆಚ್ಚವನ್ನು ಮಂಜೂರು ಮಾಡುವ ಅಧಿಕಾರವನ್ನು ಆಯಾ ಪಾಲಿಕೆಗಳ ಆಯುಕ್ತರಿಗೆ ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಸಚಿವರು ಭರವಸೆ ನೀಡಿದ ನಂತರ, ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಎ. ಅಮೃತರಾಜ್ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ನೇತೃತ್ವದಲ್ಲಿ ಪಾಲಿಕೆ ಸಂಘಗಳ ಪದಾಧಿಕಾರಿಗಳು ‘ಮುಷ್ಕರ ವಾಪಸ್‌ ಪಡೆದಿದ್ದೇವೆ’ ಎಂದು ಘೋಷಿಸಿ, ಸುರೇಶ್‌ ಅವರನ್ನು ಸನ್ಮಾನಿಸಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.