ADVERTISEMENT

ರಾಹುಲ್‌ ಅವರೇ, ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ ಎಂದು ಕಾಲೆಳೆದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2022, 7:15 IST
Last Updated 15 ಅಕ್ಟೋಬರ್ 2022, 7:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್‌ ಗಾಂಧಿ ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್‌ ಜೋಡೋ’ ಯಾತ್ರೆ ಬಳ್ಳಾರಿಗೆ ತಲುಪಿದೆ. ಇದೇ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿ ಬಿಜೆಪಿ ಟ್ವೀಟ್ ಮಾಡಿದೆ.

‘ಆಂಧ್ರಪ್ರದೇಶ ₹99.15, ತೆಲಂಗಾಣ ₹97.82, ರಾಜಸ್ಥಾನ ₹93.72, ಕರ್ನಾಟಕ ₹87.94 ರಷ್ಟಿದೆ. ರಾಹುಲ್‌ ಅವರೇ, ಬಿಜೆಪಿಯೇತರ ರಾಜ್ಯಗಳಲ್ಲಿ ನಿಮಗೆ ಬೆಲೆ ಏರಿಕೆಯ ಬಿಸಿ ತಾಗಬಹುದು’ ಎಂದು ಬಿಜೆಪಿ ಲೇವಡಿ ಮಾಡಿದೆ.

ADVERTISEMENT

‘ರಾಹುಲ್ ಅವರು ನೆನಪಿಡಲೇ ಬೇಕಾದ ರಾಜ್ಯದ ಕೆಲವೊಂದಷ್ಟು ಸಂಗತಿಗಳಿವೆ‌. ಅಮೇಥಿ ಸೋಲಿನ‌ ಭಯದಿಂದ ಸೋನಿಯಾ ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಆದರೆ, ಗೆದ್ದ ಬಳಿಕ ಅದೇ ಕ್ಷೇತ್ರವನ್ನು ಎಡಗಾಲಿನಲ್ಲಿ‌ ಒದ್ದು ರಾಜಿನಾಮೆ ನೀಡಿ, ಅಮೇಥಿಗೆ ಓಡಿ ಹೋದರು. ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ’ ಎಂದು ಬಿಜೆಪಿ ಟೀಕಿಸಿದೆ.

‘ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ‌ ಸ್ಪರ್ಧಿಸಿದಾಗ ಅವರ ಗೆಲುವಿನಲ್ಲಿ ಮತ್ತೊಬ್ಬ ಮಹಿಳೆ ಮೋಟಮ್ಮ ಮಹತ್ತರ ಪಾತ್ರ ವಹಿಸಿದ್ದರು. ಅದೇ ಮೋಟಮ್ಮ ಅವರನ್ನು ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ನಿಕೃಷ್ಟವಾಗಿ ನಡೆಸಿಕೊಂಡರು. ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ’ ಎಂದು ಬಿಜೆಪಿ ಗುಡುಗಿದೆ.

‘ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ನಾಯಕ, ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅತ್ಯಂತ ಅಮಾನವೀಯವಾಗಿ ರಾಜೀವ್ ಗಾಂಧಿ ಪದಚ್ಯುತಗೊಳಿಸಿದ್ದರು. ರಾಹುಲ್‌ ಗಾಂಧಿ‌ ಅವರೇ, ತಮ್ಮದೇ ಪಕ್ಷದ ವೀರಶೈವ ಲಿಂಗಾಯತ ನಾಯಕನೊಬ್ಬನನ್ನು ರಾಜಕೀಯವಾಗಿ ತುಳಿದ ಘಟನೆಯನ್ನು‌ ಕರ್ನಾಟಕ ಬಿಡುವ ಮುನ್ನ ಒಮ್ಮೆ ನೆನಪಿಸಿಕೊಳ್ಳಿ’ ಎಂದು ಬಿಜೆಪಿ ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.