ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಬಣ ಜಗಳ ದೆಹಲಿ ಅಂಗಳ ತಲುಪಿದೆ. ಇದೇ ಮೊದಲ ಬಾರಿಗೆ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಭಿನ್ನಮತೀಯರ ವಿರುದ್ಧ ಬಹಿರಂಗ ಸಭೆಯನ್ನು ನಡೆಸಿ, ಭಿನ್ನರಿಗೆ ಎಚ್ಚರಿಕೆ ನೀಡಿದರು. ಈ ಮಧ್ಯೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಅವರ ಬಣದ ಸದಸ್ಯರು ಸಂಜೆ ದೆಹಲಿಗೆ ತೆರಳಿದರು.
ಭಾನುವಾರ ಇಡೀ ದಿನ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ವಿಜಯೇಂದ್ರ ನಿಷ್ಠರು ಮತ್ತು ಯತ್ನಾಳ ನಿಷ್ಠರ ಮಧ್ಯೆ ಪರಸ್ಪರ ವಾಕ್ಸಮರ ನಡೆಯಿತು. ತೆರೆಮರೆಯಿಂದ ಎಚ್ಚರಿಕೆ ಸಂದೇಶ ನೀಡುತ್ತಿದ್ದ ವಿಜಯೇಂದ್ರ ಅವರು ಯತ್ನಾಳ ಅವರ ವಿರುದ್ಧ ಮೊದಲ ಬಾರಿಗೆ ನೇರ ಟೀಕಾ ಪ್ರಕಾರ ನಡೆಸಿದರು. ‘ಯತ್ನಾಳ ಉಚ್ಚಾಟನೆ ಸಂಬಂಧ ವರಿಷ್ಠರು ತೀರ್ಮಾನಿಸಲಿದ್ದಾರೆ’ ಎಂದು ಹೇಳಿದರು.
ಈ ಮಧ್ಯೆ, ಯಾವುದೇ ಬಣದ ಜತೆಗೆ ಗುರುತಿಸಿಕೊಳ್ಳದ ಹಲವು ನಾಯಕರು ಪಕ್ಷದ ಈಗಿನ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಬುದ್ದಿಮಾತಿನ ಹೇಳಿಕೆಗಳನ್ನು ನೀಡಿದರು.
‘ತಾವು ಯಾರ ವಿರುದ್ಧವೂ ವರಿಷ್ಠರಿಗೆ ದೂರು ನೀಡಿಲ್ಲ’ ಎಂದು ಎರಡೂ ಬಣಗಳ ನಾಯಕರು ಈವರೆಗೆ ಹೇಳಿಕೊಂಡಿದ್ದರು. ಭಾನುವಾರ ಮಾತಿನ ವರಸೆ ಬದಲಾಗಿತ್ತು. ಪರಸ್ಪರ ತೊಡೆ ತಟ್ಟಿ ಪಂಥಾಹ್ವಾನ ನೀಡಿದ್ದರು.
‘ವರಿಷ್ಠರಿಂದ ಯತ್ನಾಳ ಅವರಿಗೆ ನೋಟಿಸ್ ಬಂದಿದೆ’ ಎಂದು ದಟ್ಟ ವದಂತಿ ಹರಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಯತ್ನಾಳ ಅವರು ‘ನೋಟಿಸ್ ಬಂದಿದೆ ಎಂಬುದು ಮಾಧ್ಯಮಗಳ ಸೃಷ್ಟಿ’ ಎಂದರು.
ಯತ್ನಾಳ ಸೇರಿ ಪಕ್ಷದ ಕೆಲವು ನಾಯಕರು ದೆಹಲಿಗೆ ತೆರಳಿದ ವಿಚಾರವನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ ದೃಢಪಡಿಸಿದ್ದು, ‘ನಾಲ್ಕು ಗೋಡೆಗಳ ನಡುವೆ ವಿವಾದ ಬಗೆಹರಿಯಬೇಕಿತ್ತು. ಆದರೆ ಎಲ್ಲವೂ ಬಯಲಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಎಲ್ಲ ನಾಯಕರನ್ನು ಹೈಕಮಾಂಡ್ ಕರೆಸಿಕೊಂಡಿದೆ. ಯತ್ನಾಳ ಅವರನ್ನು ಈವರೆಗೆ ಕರೆದು ಮಾತನಾಡಿರಲಿಲ್ಲ. ಈಗ ಮಾತನಾಡಲಾಗುತ್ತಿದೆ’ ಎಂದರು.
ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಬಿಜೆಪಿಯ 25 ಮಾಜಿ ಶಾಸಕರು, ಕೆಲ ಹಾಲಿ ಶಾಸಕರು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಸಭೆ ನಡೆಸಿ, ಮುಂದಿನ ನಡೆಯ ಬಗ್ಗೆ ಚರ್ಚಿಸಿದರು. ಭಿನ್ನಮತೀಯರ ವಿರುದ್ಧ ಕಠಿಣ ಕ್ರಮಕ್ಕೆ ವರಿಷ್ಠರನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.
‘ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಲೇಬೇಕು ಮತ್ತು ಅವರ ಜತೆ ಗುರುತಿಸಿಕೊಂಡಿರುವ ಕುಮಾರ್ ಬಂಗಾರಪ್ಪ, ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಬಿ.ಪಿ.ಹರೀಶ ಮತ್ತು ಪ್ರತಾಪ ಸಿಂಹ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು’ ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ‘ಯತ್ನಾಳರನ್ನು ಉಚ್ಚಾಟನೆ ಮಾಡಬೇಕು ಎಂದು ವರಿಷ್ಠರಿಗೆ ದೂರು ನೀಡಲು ಸಿದ್ಧತೆ ನಡೆದಿದೆ’ ಎಂದು ಹೇಳಿದರು.
ಯತ್ನಾಳ ಬಣದ ರಮೇಶ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿ.ಪಿ.ಹರೀಶ, ಜಿ.ಎಂ. ಸಿದ್ದೇಶ್ವರ, ಪ್ರತಾಪ ಸಿಂಹ ಸೇರಿ ಹಲವು ನಾಯಕರು ಬೇರೆ–ಬೇರೆ ವಿಮಾನಗಳಲ್ಲಿ ದೆಹಲಿಗೆ ತೆರಳಿದರು.
ಬಿಎಸ್‌ವೈ ಮನೆಯಲ್ಲಿ ಸಭೆ
* ಒಳಜಗಳ ಕುರಿತು ಇದೇ ಮೊದಲ ಬಾರಿಗೆ ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಸಭೆ * ಎಂ.ಪಿ.ರೇಣುಕಾಚಾರ್ಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಿ.ಸಿ.ಪಾಟೀಲ ಹರತಾಳ ಹಾಲಪ್ಪ ಸೇರಿ 25 ಮಾಜಿ ಶಾಸಕರು ಮತ್ತು ಶಾಸಕರು ಸಭೆಯಲ್ಲಿ ಭಾಗಿ * ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯಲ್ಲಿ ವಿಜಯೇಂದ್ರ ಅವರನ್ನು ಮುಂದುವರಿಸುವಂತೆ ಮನವಿ * ಯತ್ನಾಳ ಮತ್ತವರ ಬಣದ ನಾಯಕರ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ
ವಿಜಯೇಂದ್ರ ಬಣ ನಾನು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎಂಬುದಕ್ಕೆ ದಾಖಲೆಗಳು ಇವೆ ಎಂದಿದ್ದಾರೆ. ಅವು ಇದ್ದದ್ದೇ ಆದರೆ ತಕ್ಷಣವೇ ಬಹಿರಂಗಪಡಿಸಲಿಬಿ. ಯತ್ನಾಳವೈವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಯತ್ನಾಳ ಹಿಂದೆ ಇರುವ ಶಕ್ತಿ ಯಾವುದು? ಅವರಿಗೆ ವರಿಷ್ಠರ ಬೆಂಬಲ ಇಲ್ಲ. ಅವರ ಹಿಂದೆ ಇರುವುದು ನಾಲ್ಕಾರು ಜನ ಮಾತ್ರ. ಇದೇ 10ರಂದು ದಾವಣೆಗೆರೆಯಲ್ಲಿ 60ಕ್ಕೂ ಹೆಚ್ಚು ಶಾಸಕರು ಸೇರುತ್ತೇವೆ. ಯತ್ನಾಳರ ಉಚ್ಚಾಟನೆಯ ತೀರ್ಮಾನ ಮಾಡುತ್ತೇವೆಎಂ.ಪಿ.ರೇಣುಕಾಚಾರ್ಯ ಬಿಜೆಪಿ ಮುಖಂಡ
ಸ್ವಪಕ್ಷೀಯರ ವಿರುದ್ಧವೇ ಮಾತನಾಡುತ್ತಿರುವ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ವಿಷಯದಿಂದ ನಾವು ಹಿಂದೆ ಸರಿದಿಲ್ಲಬಿ.ಸಿ.ಪಾಟೀಲ ಬಿಜೆಪಿ ಮುಖಂಡ
ಯತ್ನಾಳ ಬಣ
ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಲು ನಿಮ್ಮನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷನಾಗಿ ಮಾಡಿಲ್ಲ. ಈ ಬಗ್ಗೆ ಹುಷಾರಾಗಿರಿಅರವಿಂದ ಲಿಂಬಾವಳಿಬಿಜೆಪಿ ಮುಖಂಡ
ರಮೇಶ ಜಾರಕಿಹೊಳಿ ಆಪರೇಷನ್ ಮಾಡಿದ್ದರಿಂದ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಈಗ ನಮ್ಮನ್ನು ಆಪರೇಷನ್ ಮಾಡುತ್ತಾರಂತೆ. ಇಡೀ ರಾಜ್ಯದಲ್ಲಿ ಆಪರೇಷನ್ ಮಾಡುವಲ್ಲಿ ನಾವು ಟಾಪ್‌ಮೋಸ್ಟ್ ಡಾಕ್ಟರ್‌ಗಳಿದ್ದೇವೆ.ನಿಮ್ಮ ನರನಾಡಿಗಳನ್ನೇ ಕಟ್ ಮಾಡುತ್ತೇವೆಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಶಾಸಕ
ವಕ್ಫ್ ಹೋರಾಟದ ಕೊನೆಗೆ ದಾವಣಗೆರೆಯಲ್ಲಿ ಸಮಾವೇಶ ನಡೆಸಿ, 10 ಲಕ್ಷ ಜನರನ್ನು ಸೇರಿಸುತ್ತೇವೆರಮೇಶ ಜಾರಕಿಹೊಳಿಬಿಜೆಪಿ ಶಾಸಕ
ಎರಡೂ ಬಣಗಳ ಜತೆ ಗುರುತಿಸಿಕೊಳ್ಳದ ಪಕ್ಷದ ಕೆಲ ನಾಯಕರು, ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಒಂದೇ ವಿಷಯಕ್ಕೆ ಹೋರಾಟ ಮಾಡುತ್ತಿದ್ದಾರೆ. ಎಲ್ಲ ಪಕ್ಷಗಳಲ್ಲೂ ಸಣ್ಣ–ಪುಟ್ಟ ಸಮಸ್ಯೆಗಳು ಇರುವುದು ಸಹಜ. ಎಲ್ಲ ಗೊಂದಲಗಳನ್ನು ಪರಿಹರಿಸುವಷ್ಟು ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆಗೋವಿಂದ ಕಾರಜೋಳ, ಬಿಜೆಪಿ ಸಂಸದ
ಯಾವುದೇ ಪಕ್ಷದಲ್ಲಿ ಈ ರೀತಿಯ ಗೊಂದಲಗಳು ಇರಬಾರದು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಪಕ್ಷದಲ್ಲಿನ ಗೊಂದಲ ಈಗಾಗಲೇ ವರಿಷ್ಠರ ಗಮನಕ್ಕೆ ಬಂದಿದ್ದು, ಅವರು ಸೂಕ್ತ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಬಿಜೆಪಿಯಲ್ಲಿನ ಗೊಂದಲ ಬೇಗ ಬಗೆಹರಿಯುತ್ತದೆಜಗದೀಶ ಶೆಟ್ಟರ್, ಬಿಜೆಪಿ ಸಂಸದ
ಬಿಜೆಪಿಯೂ ಸೇರಿ ಯಾವ ಪಕ್ಷದಲ್ಲೂ ವೈಚಾರಿಕತೆ, ನೈತಿಕತೆ ಇಲ್ಲ. ಬಯ್ಯುವುದು, ಬೊಗಳೆ ಬಿಡುವುದೇ ಕೆಲಸವಲ್ಲ. ರಾಜ್ಯದಿಂದ ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಪ್ರಲ್ಹಾದ ಜೋಶಿ ರಾಜ್ಯಕ್ಕೆ ಬರುತ್ತಾರೆ, ಯಾರನ್ನೋ ಬೈದು ಹೋಗುತ್ತಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಿಗಿಂತ ಕಡೆಯಾಗಿ ಮಾತನಾಡುತ್ತಿದ್ದೀರಲ್ಲಾ? ಅಭಿವೃದ್ಧಿ ಬಗ್ಗೆ ಮಾತನಾಡಿಎ.ಎಚ್.ವಿಶ್ವನಾಥ್, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ
ನಿಷ್ಠೆ ಎಂಬುದು ಸನ್ನಿವೇಶದ ಅವಶ್ಯಕತೆ ಅಲ್ಲ, ಜೀವನದ ಜೀವಾಳ. ರಾಷ್ಟ್ರ ನಿಷ್ಠೆ - ಪಕ್ಷ ನಿಷ್ಠೆ ಅತ್ಯಂತ ಶ್ರೇಷ್ಠವಾದದ್ದು’. ಇವತ್ತಿನ ಬಿಜೆಪಿಯ ಕೆಲವರ ಹೇಳಿಕೆ-ಪ್ರತಿಹೇಳಿಕೆಗಳನ್ನು ಕೇಳಿಸಿಕೊಳ್ಳುವಾಗ, ಹಿರಿಯರಾದ ದಿವಂಗತ ಅನಂತ್ ಕುಮಾರ್ ಅವರು ಹೇಳುತ್ತಿದ್ದ ಮೇಲಿನ ಮಾತು ನೆನಪಾಯಿತುಸಿ.ಟಿ.ರವಿ, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.