ADVERTISEMENT

ಮೋದಿ ಅವರೇ, ಸತ್ಯ ಮಾತಾಡಲು ಹೃದಯ ಶುದ್ಧತೆ, ಕಲ್ಮಶ ರಹಿತ ಮನಸ್ಸಿರಬೇಕು: ಗುಂಡೂರಾವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2023, 6:37 IST
Last Updated 18 ಜೂನ್ 2023, 6:37 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್    

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೇ, ಸತ್ಯ ಮಾತಾಡಲು ಹೃದಯ ಶುದ್ಧತೆ, ಮನಸ್ಸು ಕಲ್ಮಶ ರಹಿತವಾಗಿರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಮನ್ ಕಿ‌ ಬಾತ್ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಇಂದು ಮೋದಿಯವರ 102ನೇ ಮನ್ ಕಿ‌ ಬಾತ್ ಸಂಚಿಕೆ ಪ್ರಸಾರವಾಗಲಿದೆ. ಇತ್ತೀಚಿನ ವರದಿಗಳ ಪ್ರಕಾರ ಮೋದಿಯವರ ಅಂಧ ಭಕ್ತರೂ ಮನ್ ಕಿ ಬಾತ್ ಕೇಳುತ್ತಿಲ್ಲ. ಆದರೂ, ಮೋದಿಯವರು ಛಲ ಬಿಡದ ತ್ರಿವಿಕ್ರಮನಂತೆ ಮನ್ ಕಿ ಬಾತ್ ಮಾಡುತ್ತಲೇ ಇದ್ದಾರೆ. ಮೋದಿಯವರೇ, ಇಂದಿನ ಮನ್ ಕಿ ಬಾತ್‌ನಲ್ಲಾದರೂ ಚರ್ವಿತ ಚರ್ವಣದಂತೆ ಹೇಳಿದನ್ನೇ ಹೇಳುವುದು ಬಿಟ್ಟು ಹೊಸದೇನಾದರೂ ಹೇಳುವಿರಾ’ ಎಂದು ಪ್ರಶ್ನಿಸಿದ್ದಾರೆ.

‘ಮೋದಿಯವರೇ, ನಿಮ್ಮ ಇಂದಿನ ಮನ್ ಕಿ ಬಾತ್ ಬಗ್ಗೆ ಅನೇಕ ನಿರೀಕ್ಷೆಗಳಿವೆ. ಇಂದು ನಿಮ್ಮ ಮನದಾಳದ ಮಾತಿನಲ್ಲಿ ಮಣಿಪುರದ ಹಿಂಸಾಚಾರದ ಬಗ್ಗೆ ಮಾತಾಡುವಿರೆ? ಮಹಿಳಾ ಕುಸ್ತಿಪಟುಗಳ ಮೇಲೆ ನಿಮ್ಮ ಪಕ್ಷದ ಸಂಸದ ಎಸಗಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತಾಡುವಿರೆ? ಚೀನಾ ಮತ್ತು ಭಾರತದ ಗಡಿ ಸಂಘರ್ಷದ ಬಗ್ಗೆ ದೇಶದ ಜನರೆದುರು ಸತ್ಯ ಮಾತಾಡುವಿರೆ?’ ಎಂದು ಗುಂಡೂರಾವ್ ಟೀಕಿಸಿದ್ದಾರೆ.

ADVERTISEMENT

‘ಮೋದಿ ಅವರೇ, ನಮ್ಮ ರಾಜ್ಯಕ್ಕೆ ಅಕ್ಕಿ ಕೊಡಲು ಒಪ್ಪಿ ನಂತರ ನಿರಾಕರಿಸಿದ ಬಗ್ಗೆ ಮನ್ ಕಿ ಬಾತ್‌‌ನಲ್ಲಿ ಮಾತಾಡುವಿರೆ?, ಬಡವರಿಗೆ ಸಿಗಬೇಕಾಗಿದ್ದ ಅಕ್ಕಿಯನ್ನು ಹೆಂಡ ತಯಾರಿಸಲು ಬೇಕಾದ ಎಥೆನಾಲ್ ಉತ್ಪಾದನೆಗೆ‌ ಕೊಟ್ಟಿದ್ಯಾಕೆ ಎಂಬ ಬಗ್ಗೆ ಮಾತಾಡುವಿರೆ? ನೀವು ಇಲ್ಲಿಯವರೆಗೂ ಕೊಟ್ಟ ಆಶ್ವಾಸನೆಗಳು ಎಷ್ಟು ಈಡೇರಿದೆ ಎಂಬ ಬಗ್ಗೆ ‌ಮಾತಾಡುವಿರೆ?’ ಎಂದು ಗುಂಡೂರಾವ್ ಕುಟುಕಿದ್ದಾರೆ.

‘ಮೋದಿ ಅವರೇ, ನಿಮ್ಮ ಇಂದಿನ ಮನ್ ಕಿ‌ ಬಾತ್ ಸತ್ಯ ಹಾಗೂ ವಾಸ್ತವದ ಅನಾವರಣವಾಗಿರಲಿ. ಸತ್ಯ ಹೇಳುವ ಮೂಲಕ ಈ ಮನ್ ಕಿ ಬಾತ್‌ ವಿಶಿಷ್ಟ ವಿಭಿನ್ನವಾಗಿರಲಿ. ಸತ್ಯ ಮಾತಾಡಲು ಹೃದಯ ಶುದ್ಧಿಯಿರಬೇಕು ಹಾಗೂ ಮನಸ್ಸು ಕಲ್ಮಶ ರಹಿತವಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಧೈರ್ಯವಿರಬೇಕು.‌ ಇಂದಾದರೂ ನಾವು ನಿಮ್ಮಿಂದ ಸತ್ಯ ನಿರೀಕ್ಷಿಸಬಹುದೇ?’ ಎಂದು ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.