ADVERTISEMENT

ಅಡ್ಜಸ್ಟ್‌ಮೆಂಟ್‌ ರಾಜಕಾರಣದ ಹರಿಕಾರ; ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಟೀಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 6:10 IST
Last Updated 13 ಡಿಸೆಂಬರ್ 2021, 6:10 IST
ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ
ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ   

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ನಡುವಣ ವಾಕ್ಸಮರ ಮುಂದುವರಿದಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಸೋಮವಾರ ಸರಣಿ ಟ್ವೀಟ್‌ಗಳ ಮೂಲಕ ಟೀಕೆ ಮಾಡಿದ್ದು, ಅಡ್ಜಸ್ಟ್‌ಮೆಂಟ್‌ ರಾಜಕಾರಣದ ಹರಿಕಾರ ನೀವಲ್ಲವೇ ಎಂದು ಪ್ರಶ್ನಿಸಿದ್ದಾರೆ.

'ಕಟ್ಟುವುದು ಮನುಷ್ಯತ್ವ, ಕೆಡವೋದು ರಾಕ್ಷಸತ್ವ. ನಿಮಗೆ ಕೆಡವಿ ಗೊತ್ತೇ ವಿನಾ ಕಟ್ಟಿ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದ ಕಾಂಗ್ರೆಸ್‌ ನಾಯಕರು ಸರಕಾರದ ನೇತೃತ್ವ ವಹಿಸಿ ಎಂದರು. ಹಾಗಾದರೆ, ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸಿದ್ದ ಸೂತ್ರಧಾರ?' ಎಂದು ಹೇಳಿದ್ದಾರೆ.

'ನಾನು ಜೆಡಿಎಸ್‌ನವರ ಮನೆ ಬಾಗಿಲಿಗೆ ಹೋಗಿಲ್ಲ ಎನ್ನುತ್ತೀರಿ, ನಿಮ್ಮನ್ನು ಕರೆದವರು ಯಾರು? ನಾವೇನು ಎಲೆ-ಅಡಿಕೆ ಕೊಟ್ಟು ಆಹ್ವಾನ ಕೊಟ್ಟೆವಾ? ಬಂದು ಬೆಂಬಲದ ಭಿಕ್ಷೆ ಬೇಡಿದವರು ಯಾರು? ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದಾಗಲೇ ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದವರು ಯಾರು ಮಿಸ್ಟರ್‌ ಟರ್ಮಿನೇಟರ್?‌' ಎಂದು ಹರಿಹಾಯ್ದಿದ್ದಾರೆ.

'ವರಿಷ್ಠರು ತಂದ ಸರಕಾರವನ್ನೇ ತೆಗೆದಿರಿ, ಬಿಜೆಪಿ ಸರಕಾರ ಬರಲು ಕಾರಣರಾದಿರಿ. ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಬಿಜೆಪಿ ಸರಕಾರ ಬರಲು ಶಾಸಕರ ಟೀಂ ರೆಡಿ ಮಾಡಿದವರು ಯಾರು? ಇಷ್ಟೆಲ್ಲಾ 'ಸಿದ್ದಕಲೆ' ಎಲ್ಲಿಂದ ಬಂತು ಮಿಸ್ಟರ್ ಸಿದ್ದಕಲಾನಿಪುಣಪ್ಪಾ!?' ಎಂದು ಪ್ರಶ್ನಿಸಿದರು.

'ಜೆಡಿಎಸ್‌ ಬಿಜೆಪಿಯ 'ಬಿ' ಟೀಂ ಅನ್ನುತ್ತೀರಿ. ಹಾಗಾದರೆ; ಆಡಳಿತ ಪಕ್ಷದಲ್ಲೇ ಕೂತು ವಿರೋಧಿಗಳೊಂದಿಗೆ ಕುಮ್ಮಕ್ಕಾಗಿ ಬೆನ್ನಿಗಿರಿದ 'ಬ್ರೂಟಸ್‌' ಯಾರು? ಮೈತ್ರಿ ಸರಕಾರಕ್ಕೆ ಮೊದಲ ದಿನದಿಂದಲೇ ಮಹೂರ್ತ ಇಟ್ಟವರು ಯಾರು? ಸ್ವಯಂಘೋಷಿತ ಅಹಿಂದ ನಾಯಕರೇ ನಿಮ್ಮೊಳಗಿದೆ ಕಾರ್ಕೋಟಕ 'ವಿಷ'. ಆ ವಿಷವೇ ನಿಮಗೆ ಮುಳುವು' ಎಂದು ಟೀಕಿಸಿದರು.

'ಅಹಾ!! ʼಕೋಲಾರದಲ್ಲಿ ಕಲರ್‌ಫುಲ್‌ ಸುಳ್ಳುಗಳ ಸರಮಾಲೆʼಯನ್ನೇ ಸೃಷ್ಟಿಸಿ ಕೃತಾರ್ಥರಾಗಿದ್ದೀರಿ. ʼಅಡ್ಜಸ್ಟ್‌ಮೆಂಟ್‌ ರಾಜಕಾರಣʼದ ಹರಿಕಾರರು ನೀವಲ್ಲವೇ? ವಿನಾಶಕಾಲೇ ವಿಪರೀತ ಸುಳ್ಳು!!' ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.