ADVERTISEMENT

ಸಿದ್ದರಾಮಯ್ಯ ಸಭೆಗೆ ಸರ್ಕಾರ ಅಡ್ಡಗಾಲು: ತಿರುಗುಬಾಣ ಪ್ರಯೋಗಿಸಿದ ಯಡಿಯೂರಪ್ಪ

ರಾಜೇಶ್ ರೈ ಚಟ್ಲ
Published 19 ಮೇ 2021, 19:31 IST
Last Updated 19 ಮೇ 2021, 19:31 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕೋವಿಡ್‌ ನಿರ್ವಹಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲು ಮುಂದಾಗಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡೆಗೆ ಸರ್ಕಾರ ಅಡ್ಡಗಾಲು ಹಾಕಿದೆ.

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಗರ ಪಾಲಿಕೆಗಳ ಆಯುಕ್ತರು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆ ಝೂಮ್‌ ತಂತ್ರಾಂಶದ ಮೂಲಕ ಇದೇ 21ರಿಂದ 25ರವರೆಗೆ ವಿಡಿಯೊ ಸಂವಾದ ನಡೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದರು.

ಪ್ರತಿ ಜಿಲ್ಲೆಯ ಅಧಿಕಾರಿಗಳ ಜೊತೆ ತಲಾ ಒಂದು ಗಂಟೆ ಚರ್ಚಿಸಲು ನಿರ್ಧರಿಸಿದ್ದ ಅವರು, ಈ ಬಗ್ಗೆ ಮುಖ್ಯ ಕಾರ್ಯದರ್ಶಿ, ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಗೂಜಿಲ್ಲಾಮಟ್ಟದ ಅಧಿಕಾರಿಗಳಿಗೆ ಇದೇ 17ರಂದು ಪತ್ರ ಬರೆದಿದ್ದರು. ಸಂವಾದ ನಡೆಸುವ ವೇಳಾಪಟ್ಟಿ ಮತ್ತು ಸಭೆಗೆ ಹಾಜರಾಗುವ ವೇಳೆ ಇರಬೇಕಾದ ಮಾಹಿತಿಯ ನಮೂನೆಯನ್ನೂ ಪತ್ರದ ಜತೆ ಕಳುಹಿಸಿದ್ದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಆದೇಶ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಕೋರಿದ್ದರು.

ADVERTISEMENT

‘ಈ ರೀತಿ ಸಭೆ ನಡೆಸಿ ಮಾಹಿತಿ ಪಡೆಯುವ ಅವಕಾಶ ಇಲ್ಲ. ಅಪೇಕ್ಷಿತ ಮಾಹಿತಿಯನ್ನು ಪತ್ರದ ಮೂಲಕ ಪಡೆಯಲು ಅವಕಾಶ ಇದೆ’ ಎಂದು ಮುಖ್ಯಮಂತ್ರಿಯವರ ಸೂಚನೆ ಅನುಸಾರ ಮುಖ್ಯ ಕಾರ್ಯದರ್ಶಿ ವರು ಸಿದ್ದರಾಮಯ್ಯಗೆ ಬುಧವಾರ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ 2009 ಜೂನ್‌ 25, 2016ರ ಏ. 27 ಮತ್ತು 2019 ಏ. 16ರ ಸುತ್ತೋಲೆಯಲ್ಲಿರುವ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

2009 ಜೂನ್‌ 25 ಸುತ್ತೋಲೆಯಲ್ಲಿ, ‘ವಿರೋಧ ಪಕ್ಷದ ನಾಯಕರು ಸರ್ಕಾರದ ಭಾಗವಾಗಿಲ್ಲದೇ ಇರುವುದರಿಂದ ಅವರಿಗೆ ಸಚಿವರಿಗೆ ಇರುವ ಆಡಳಿತಾತ್ಮಕ ಅಧಿಕಾರ ನೀಡಲಾಗಿಲ್ಲ. ಹೀಗಾಗಿ, ಆಡಳಿತಾತ್ಮಕ ಮಾಹಿತಿಯನ್ನು ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಮತ್ತು ಇತರ
ಸರ್ಕಾರಿ ಅಧಿಕಾರಿಗಳಿಂದ ಪತ್ರ ಬರೆದು ಪಡೆಯಬಹುದಾಗಿದೆ. ಆದರೆ, ಅಧಿಕಾರಿಗಳ ಸಭೆ ನಡೆಸಲು ವಿರೋಧ ಪಕ್ಷದ ನಾಯಕರಿಗೆ ಅವಕಾಶ ಇರುವುದಿಲ್ಲ’ ಎಂದು ತಿಳಿಸಲಾಗಿದೆ. ಈ ಪತ್ರ ಬರೆದಾಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.

ಈ ಸುತ್ತೋಲೆಯಲ್ಲಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ 2016ರ ಏ. 27ರಂದು( ಈ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೆ ಜಗದೀಶ ಶೆಟ್ಟರ್‌ ವಿರೋಧ ಪಕ್ಷದ ನಾಯಕರಾಗಿದ್ದರು) ರಾಜ್ಯ ಸರ್ಕಾರ ಮತ್ತೆ ಪತ್ರ ಬರೆದಿತ್ತು. ಈ ಅಂಶಗಳನ್ನು 2019ರಲ್ಲಿ ಮತ್ತೊಮ್ಮೆ ಪುನರುಚ್ಚರಿಸಲಾಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅವಕಾಶ ಇಲ್ಲ ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಪತ್ರದಲ್ಲಿ ಏನಿದೆ?

‘ರಾಜ್ಯದಲ್ಲಿ ಕೋವಿಡ್‌ ಹೆಚ್ಚುತ್ತಿದ್ದು, ಜೊತೆಗೆ ಕಪ್ಪು ಶಿಲೀಂಧ್ರ ರೋಗವೂ ಆಕ್ರಮಿಸಿಕೊಂಡಿದೆ. ಇವುಗಳನ್ನು ನಿಭಾಯಿಸಲು ಜಿಲ್ಲಾಡಳಿತಗಳು ಆಸ್ಪತ್ರೆ, ಔಷಧ, ಆಮ್ಲಜನಕ, ವೆಂಟಿಲೇಟರ್‌, ಹಾಸಿಗೆಗಳು, ಟೆಸ್ಟ್‌ಗಳು, ಆಂಬುಲೆನ್ಸ್‌ಗಳು, ಶವಸಂಸ್ಕಾರ ವ್ಯವಸ್ಥೆ, ವೈದ್ಯರು ಮತ್ತಿತರ ಮಾನವ ಸಂಪನ್ಮೂಲ ಸಂಗ್ರಹಣೆ ಕುರಿತು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಲಾಕ್‌ಡೌನ್‌ನಿಂದ ದುಡಿಯುವ ವರ್ಗಗಳು, ಅಲೆಮಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಕುರಿತು ವಿಡಿಯೊ ಸಂವಾದದಲ್ಲಿ ಮಾಹಿತಿ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಅಧಿಕಾರಿಗಳು ಖುದ್ದು ಹಾಜರಿದ್ದು ಮಾಹಿತಿ ನೀಡಬೇಕು’ ಎಂದು ಎಲ್ಲ ಅಧಿಕಾರಿಗಳಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.