ADVERTISEMENT

ಸಿ.ಡಿ ವಿಚಾರ ನಿಲ್ಲಿಸಿ: ನಳಿನ್ ಕುಮಾರ್ ಕಟೀಲ್ ತಾಕೀತು

ಟೀಕೆಗಳಿಂದ ಮುಖ್ಯಮಂತ್ರಿ ವರ್ಚಸ್ಸಿಗೆ ಧಕ್ಕೆ– ಪಕ್ಷದ ವೇದಿಕೆಯಲ್ಲಿಯೇ ಅಭಿಪ್ರಾಯ ಹಂಚಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 18:31 IST
Last Updated 15 ಜನವರಿ 2021, 18:31 IST
ನಳಿನ್ ಕುಮಾರ್ ಕಟೀಲ್‌
ನಳಿನ್ ಕುಮಾರ್ ಕಟೀಲ್‌   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಸಿ.ಡಿ ವಿಚಾರವಾಗಿ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಶಾಸಕರಿಗೆ ತಾಕೀತು ಮಾಡಿದ್ದಾರೆ.

‘ಇಂತಹ ಟೀಕೆಗಳಿಂದ ಮುಖ್ಯಮಂತ್ರಿ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಅಭಿಪ್ರಾಯಗಳನ್ನು ಹೇಳಿಕೊಳ್ಳಬಹುದು. ಬಹಿರಂಗವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅವರು ಶಾಸಕರಿಗೆ ಸೂಚಿಸಿದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಟೀಕಾ ಪ್ರಹಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಟೀಲ್ ಶುಕ್ರವಾರ ಮಂಗಳೂರಿನಲ್ಲಿ ಎಚ್ಚರಿಕೆ ಮಾತುಗಳನ್ನು ಹೇಳಿದ್ದಾರೆ.

ADVERTISEMENT

ಇನ್ನು ಕೆಲವರಿಗೆ ದೂರವಾಣಿ ಮೂಲಕವೂ ತಿಳಿ ಹೇಳುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಯೋಗೇಶ್ವರ್‌ಗೆ ಸಚಿವ ಸ್ಥಾನ ಸರಿ, ವಿಶ್ವನಾಥ್ ಅಸಮಾಧಾನವೂ ಸರಿ’

(ಮೈಸೂರು ವರದಿ): ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಎಚ್‌.ವಿಶ್ವನಾಥ್‌ ಜತೆಗೆ ಸಿ.‍ಪಿ. ಯೋಗೇಶ್ವರ್‌ ಕೂಡಾ ಕಾರಣರು’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಹೇಳಿದರು.

‘ಯೋಗೇಶ್ವರ್‌ಗೆ ಸಚಿವ ಸ್ಥಾನ ಕೊಟ್ಟಿದ್ದು ಸರಿ; ಸಚಿವ ಸ್ಥಾನ ಸಿಗದೇ ಇದ್ದುದಕ್ಕೆ ವಿಶ್ವನಾಥ್‌ ಅಸಮಾಧಾನ ವ್ಯಕ್ತಪಡಿಸಿದ್ದೂ ಸರಿ. ಯೋಗೇಶ್ವರ್‌ಗೆ ಏಕೆ ಕೊಟ್ಟಿರಿ ಎಂದು ಯಾರೂ ಸಿ.ಎಂ ಅವರನ್ನು ಪ್ರಶ್ನಿಸಲಾಗದು. ಸಂಪುಟಕ್ಕೆ ಸೇರಿಸಿಕೊಳ್ಳುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ’ ಎಂದು ಹೇಳಿದರು.

‘ವಿಶ್ವನಾಥ್ ಅವರು ಪಕ್ಷಕ್ಕೆ ಸೇರುವಾಗ ಮುಖ್ಯಮಂತ್ರಿ ಜತೆ ಪ್ರತ್ಯೇಕವಾಗಿ ಮಾತನಾಡಿದ್ದರು. ಮಂತ್ರಿ ಸ್ಥಾನ ಕೈ ತಪ್ಪಲು ಅನೇಕ ಕಾರಣಗಳಿವೆ. ಅದನ್ನೆಲ್ಲ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ’ ಎಂದರು.

‘ಕುಟುಂಬ ರಾಜಕಾರಣಕ್ಕೆ ಮುಖ್ಯಮಂತ್ರಿ ಅವಕಾಶ ನೀಡಬಾರದು. ಇದು ಆಡಳಿತದ ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ಯೋಚಿಸಬೇಕು, ಜನರು ತಿರುಗಿ ಬೀಳಬಹುದು’ ಎಂದೂ ಅವರು ಎಚ್ಚರಿಸಿದರು.

ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ: ಎಂಟಿಬಿ ಸವಾಲು

ಚಿತ್ರದುರ್ಗ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ. ಇದ್ದರೆ ಬಿಡುಗಡೆ ಮಾಡಲಿ. ರಾಜ್ಯದ ಜನರಿಗೆ ಅದು ಗೊತ್ತಾಗಲಿ’ ಎಂದು ಸಚಿವ ಎಂ.ಟಿ.ಬಿ ನಾಗರಾಜ್‌ ಶುಕ್ರವಾರ ಸವಾಲು ಹಾಕಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿ.ಡಿ ಇರುವುದಾಗಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ‌ ಹಾಗೂ ಕಾಂಗ್ರೆಸ್‌ ನಾಯಕರ ಹೇಳಿಕೆ ಅಂತೆ–ಕಂತೆಯಾಗಿದೆ’ ಎಂದರು.

‘ಸಿ.ಡಿ ಇಟ್ಟುಕೊಂಡು ಯಾರು ಹೆದರಿಸಿದ್ದಾರೋ ಗೊತ್ತಿಲ್ಲ. ಸಿ.ಡಿ. ಕೋಟಾದಡಿ ಸಚಿವರಾದವರ ಬಗ್ಗೆ ಮಾಹಿತಿ ಇಲ್ಲ. ಪ್ರತಿ ದಿನ ಹೆದರಿಸಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ’ ಎಂದರು.

‘ಸಿ.ಪಿ.ಯೋಗೇಶ್ವರ ಅವರು ಅತೃಪ್ತರನ್ನು ಒಗ್ಗೂಡಿಸಲು ಸಾಲ ಮಾಡಿದ್ದರು ಎಂಬುದು ಸತ್ಯಕ್ಕೆ ದೂರವಾದುದು. ಅವರು ಯಾವ ಮನೆ, ಮಠ ಅಡ ಇಟ್ಟಿಲ್ಲ. ನನ್ನ ಬಳಿಯೂ ಸಾಲ ಪಡೆದಿಲ್ಲ. ರಮೇಶ ಜಾರಕಿಹೊಳಿ ಸತ್ಯವನ್ನು ಮಾತ್ರ ಹೇಳಬೇಕು. ವರಿಷ್ಠರ ತೀರ್ಮಾನದಂತೆ ಯೋಗೇಶ್ವರ್ ಸಚಿವರಾಗಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

‘ವಿಶ್ವನಾಥ್ ದುಡುಕುತ್ತಿದ್ದಾರೆ, ಮುನಿರತ್ನ ವಿರುದ್ಧ ಕೇಸ್‌ ಇದೆ’: ತುಮಕೂರಿನಲ್ಲಿ ಮಾತನಾಡಿದ ಅವರು, ‘ಸಚಿವ ಸ್ಥಾನ ಸಿಗದಿದ್ದಕ್ಕೆ ಎಚ್.ವಿಶ್ವನಾಥ್ ಬೇಸರದಿಂದ ಮಾತನಾಡುತ್ತಿದ್ದು, ದುಡುಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವಕಾಶಗಳು ಇವೆ’ ಎಂದರು.‌

ಹಾವೇರಿಯಲ್ಲಿ ಮಾತನಾಡಿದ ಅವರು, ‘ಶಾಸಕ‌ ಮುನಿರತ್ನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳಿವೆ. ಹೀಗಾಗಿ ಸಚಿವ ಸ್ಥಾನ ಸಿಕ್ಕಿಲ್ಲ. ಎಲ್ಲವೂ ಬಗೆಹರಿದ ಮೇಲೆ ಮುಂದಿನ ದಿನಗಳಲ್ಲಿ ಸಚಿವರಾಗುತ್ತಾರೆ’ ಎಂದು ಹೇಳಿದರು.

ಸಚಿವ ಸಿ.ಪಿ.ಯೋಗೇಶ್ವರ 420 ಎಂಬ ವಿಶ್ವನಾಥ್ ಹೇಳಿಕೆ ಕುರಿತು ‘ಯಾವ ಪ್ರಕರಣಗಳಿವೆಯೋ ಅವು ನ್ಯಾಯಾಲಯದಲ್ಲಿ ಇತ್ಯರ್ಥ ಆಗಬೇಕು.ಮುಖ್ಯಮಂತ್ರಿ ಮತ್ತು ವರಿಷ್ಠರು ತೀರ್ಮಾನಿಸಿಯೇ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ’ ಎಂದರು.

ಸಿ.ಎಂ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಿಡಿಮಿಡಿ

ಶಿವಮೊಗ್ಗ: ‘ಸಂಪುಟ ವಿಸ್ತರಣೆಯ ನಂತರದ ಬೆಳವಣಿಗೆಗಳು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರ ತಂದಿವೆ. ಮುಖ್ಯಮಂತ್ರಿ ವಿರುದ್ಧದ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜೆಡಿಎಸ್‌, ಕಾಂಗ್ರೆಸ್‌ ತೊರೆದು ಶಾಸಕರು ಬರದಿದ್ದರೆ ಬಿಜೆಪಿ ಸರ್ಕಾರ ಬರುತ್ತಿರಲಿಲ್ಲ. ಸಹಾಯ ಮಾಡಿದ ಶಾಸಕರಿಗೆ ಸಚಿವ ಸ್ಥಾನ ನೀಡುವುದು ನ್ಯಾಯ. ಸಿ.ಎಂ., ಹೈಕಮಾಂಡ್‌ ನಿರ್ಧಾರವನ್ನು ಬಹಿರಂಗವಾಗಿ ವಿರೋಧಿಸುವುದು ಶೋಭೆ ತರುವುದಿಲ್ಲ’ ಎಂದರು.

ಮೂಲ, ವಲಸಿಗರು ಎಂಬ ಪ್ರಶ್ನೆಯೇ ಇಲ್ಲ. ಅವರೆಲ್ಲ ಬಿಜೆಪಿ ಟಿಕೆಟ್‌ ಪಡೆದು ಗೆದ್ದು ಬಂದಿದ್ದಾರೆ. ಪಕ್ಷದ ಚೌಕಟ್ಟು ಮೀರಿದವರು ತೊಂದರೆ ಅನುಭವಿಸುತ್ತಾರೆ. ಇದೇ ಮನೋಸ್ಥಿತಿ ಮುಂದುವರಿದರೆ ವರಿಷ್ಠರು ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂದೂ ಎಚ್ಚರಿಸಿದರು.

ರಾಜ್ಯದಲ್ಲಿ ವಿರೋಧ ಪಕ್ಷ ಅಸ್ತಿತ್ವಕ್ಕಾಗಿ ಹುಡುಕಾಡುತ್ತಿದೆ. ಪಕ್ಷದ ಸಮಸ್ಯೆ ಬಗೆಹರಿಸಲಾಗದೇ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಬಿಜೆಪಿ ಸಮಸ್ಯೆಯತ್ತ ಬೆರಳು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

‘ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡಲು ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸುವೆ. ಅರ್ಹ ಸಮುದಾಯಗಳಿಗೆ ಮೀಸಲಾತಿ ಸಿಗಬೇಕೆನ್ನುವ ನಮ್ಮ ನಿಲುವಿಗೆ ಬದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.