ADVERTISEMENT

‘ಪ್ರಜಾಪ್ರಭುತ್ವದ ಜೀವಾಳವೇ ಮಾಧ್ಯಮ’-ಬಸವರಾಜ ಬೊಮ್ಮಾಯಿ

ಪ್ರೆಸ್‌‌ಕ್ಲಬ್ ಆಫ್ ಬೆಂಗಳೂರು: ಸಾಧಕರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 21:14 IST
Last Updated 24 ಫೆಬ್ರುವರಿ 2022, 21:14 IST
ನಗರದಲ್ಲಿ ಗುರುವಾರ 'ಪ್ರೆಸ್ ಕ್ಲಬ್ ಆಫ್‌ ಬೆಂಗಳೂರು' ಆಯೋಜಿಸಿದ್ದ ವರ್ಷದ ವ್ಯಕ್ತಿ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಬಿ.ಎಸ್. ಯಡಿಯೂರಪ್ಪ ಅವರಿಗೆ 2021ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. (ಎಡದಿಂದ) ಪ್ರೆಸ್‌‌ ಕ್ಲಬ್ ಅಧ್ಯಕ್ಷ ಕೆ. ಸದಾಶಿವ ಶೆಣೈ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಸಚಿವರಾದ ಮುರುಗೇಶ್ ನಿರಾಣಿ, ಮುನಿರತ್ನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರೆಸ್‌‌ ಕ್ಲಬ್ ಪ್ರಧಾನ ಕಾರ್ಯದರ್ಶಿ ಕಿರಣ್ ಎಚ್.ವಿ ಇದ್ದರು --ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಆರೋಗ್ಯಕರ ಸಮಾಜ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರೆಸ್ ಕ್ಲಬ್ ಆಫ್‌ ಬೆಂಗಳೂರು ಗುರುವಾರ ಆಯೋಜಿಸಿದ್ದ ವರ್ಷದ ವ್ಯಕ್ತಿ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಹೊಣೆಗಾರಿಕೆ ಹೆಚ್ಚು. ಮಾಧ್ಯಮ ರಂಗ ಪ್ರಜಾಪ್ರಭುತ್ವದ ಜೀವಾಳ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾಧ್ಯಮಗಳು ದನಿಯಾಗಬೇಕು’ ಎಂದು ಹೇಳಿದರು.

ಶಾಸಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪತ್ರಕರ್ತರಿಗೆ ಪರಿಹಾರ ನೀಡುವ ಕೆಲಸ ಮಾಡಿದ್ದೇ‌ನೆ.‌ ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಿರುವ ಮಾಧ್ಯಮ ಕ್ಷೇತ್ರದ ನಂಬಿಕೆ ಎಂದಿಗೂ ಕಡಿಮೆಯಾಗಬಾರದು’ ಎಂದರು.‌

ADVERTISEMENT

ನಟ ಸುದೀಪ್ ಮಾತನಾಡಿ, ‘ಮೊದಲ ದಿನ ಹಾಗೂ ಕೆಟ್ಟ ದಿನಗಳ ಸಂದರ್ಭದಲ್ಲಿ ನನ್ನ ಬಗ್ಗೆ ಲೇಖನಗಳನ್ನು ಬರೆದಿರುವವರನ್ನು ಮರೆಯುವುದಿಲ್ಲ’ ಎಂದರು.

ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಪತ್ರಕರ್ತ ಎಚ್‌.ಆರ್‌. ರಂಗನಾಥ್‌ ಮತ್ತು ನಟ ರಮೇಶ್‌ ಅರವಿಂದ್‌ ಅವರು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಿದರು.

ಪ್ರಶಸ್ತಿ ಪುರಸ್ಕೃತರು: 2021ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಶಾಸಕ ಬಿ.ಎಸ್.ಯಡಿಯೂರಪ್ಪ ಹಾಗೂ 2020ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ವಿಪ್ರೋ ಸಂಸ್ಥೆ ಅಧ್ಯಕ್ಷ ಅಜೀಂ ಪ್ರೇಮ್ ಜೀ, 2020ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ 2021 ಸಾಲಿನ ವಿಶೇಷ ಪ್ರಶಸ್ತಿಯನ್ನು ಕೋವಿಡ್ ತಜ್ಞರ ಸಮಿತಿ ಸದಸ್ಯ ಡಾ. ದೇವಿಪ್ರಸಾದ್ ಶೆಟ್ಟಿ ಮತ್ತು ನಟ ಸುದೀಪ್ ಅವರಿಗೆ ನೀಡಿ ಗೌರವಿಸಲಾಯಿತು.

ಪತ್ರಕರ್ತರಾದ ಪದ್ಮರಾಜ ದಂಡಾವತಿ, ಎಂ.ಕೆ. ಭಾಸ್ಕರ ರಾವ್‌, ರಂಜಾನ್‌ ದರ್ಗಾ, ಛಾಯಾಗ್ರಾಹಕ ವಿಶ್ವನಾಥ್‌ ಸುವರ್ಣ, ‘ಪ್ರಜಾವಾಣಿ’ಯ ಸುದ್ದಿ ಸಂಪಾದಕ ಯತೀಶ್‌ ಕುಮಾರ್‌ ಜಿ.ಡಿ. ಮತ್ತು ವರದಿಗಾರ ವಿಭಾಗದ ಮುಖ್ಯಸ್ಥ ವೈ.ಗ. ಜಗದೀಶ್‌ ಸೇರಿದಂತೆ 41 ಮಂದಿಗೆ 2020 ಮತ್ತು 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.