ADVERTISEMENT

ಕೆಪಿಎಸ್‌ಸಿ: ಸ್ಥಾನಪಲ್ಲಟ ಪಟ್ಟಿ ಪ್ರಕಟಣೆಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:45 IST
Last Updated 25 ಏಪ್ರಿಲ್ 2019, 20:45 IST
   

ಬೆಂಗಳೂರು: ‘ಸ್ಥಾನಪಲ್ಲಟಕ್ಕೆ ಒಳಗಾಗಿರುವ 115 ಅಧಿಕಾರಿಗಳ ಪಟ್ಟಿಯನ್ನು ಹುದ್ದೆಯನ್ನು ತೋರಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

1998ರ ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಎಂ.ಬಿ.ನರಗುಂದ ಅವರು, ‘ಸ್ಥಾನಪಲ್ಲಟಕ್ಕೆ ಸಂಬಂಧಿಸಿದ ಪಟ್ಟಿಯ ಬಗ್ಗೆ ನಮ್ಮದೇನೂ ತಕರಾರು ಇಲ್ಲ. ಆದರೆ, ನೇಮಕಾತಿ ಆದೇಶವನ್ನು ಇನ್ನೂ ಹೊರಡಿಸಿಲ್ಲ’ ಎಂದು ತಿಳಿಸಿದರು.

ADVERTISEMENT

ಅಡ್ವೊಕೇಟ್ ಜನರಲ್‌ ಉದಯ ಹೊಳ್ಳ ಅವರು, ‘ಸ್ಥಾನಪಲ್ಲಟಕ್ಕೆ ಒಳಗಾದ ಅಧಿಕಾರಿಗಳಲ್ಲಿ ಕೆಲವರು ಚುನಾವಣಾ ಕರ್ತವ್ಯದ ಮೇಲಿದ್ದಾರೆ. ಹೀಗಾಗಿ ಅವರಿಗೆ ಹುದ್ದೆ ತೋರಿಸಲು ಆಗಿಲ್ಲ. ಇದಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಬೇಕು’ ಎಂದು ಪುನರುಚ್ಚರಿಸಿದರು.

ಇದನ್ನು ಒಪ್ಪದ ನ್ಯಾಯಪೀಠ, ‘ಈ ಬಗ್ಗೆ ವಿಳಂಬ ಧೋರಣೆ ಅನುಸರಿಸುವುದು ತರವಲ್ಲ. ತಕ್ಷಣವೇ ಸಂಬಂಧಿಸಿ ಇಲಾಖೆಗಳ ಮುಖ್ಯಸ್ಥರು ಆದೇಶ ಹೊರಡಿಸುವಂತೆ ನೋಡಿಕೊಳ್ಳಿ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರಕರಣದ ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.