ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಕ್ವಾಂಟಮ್ ಇಂಡಿಯಾ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಎಂ.ಸಿ. ಸುಧಾಕರ್, ಕೃಷ್ಣ ಬೈರೇಗೌಡ, ಎನ್. ಎಸ್. ಬೋಸರಾಜು, ಎಂ.ಬಿ.ಪಾಟೀಲ, ಪ್ರಿಯಾಂಕ ಖರ್ಗೆ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ:ರಂಜು ಪಿ.
ಬೆಂಗಳೂರು: 2035ರ ವೇಳೆಗೆ ಕರ್ನಾಟಕವನ್ನು ಕ್ವಾಂಟಮ್‌ನ ಆರ್ಥಿಕ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿದೆ. ಇದನ್ನು ಸಾಧಿಸಲು ಬೇಕಾದ ಕೌಶಲ, ಮೂಲಸೌಕರ್ಯ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ₹1 ಸಾವಿರ ಕೋಟಿ ನಿಧಿ ಮೀಸಲಿರಿಸಿ ಕರ್ನಾಟಕ ಕ್ವಾಂಟಮ್ ಮಿಷನ್ (ಕೆಕ್ಯುಎಂ) ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಗುರುವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಐಐಎಸ್‌ಸಿ ಕ್ವಾಂಟಮ್ ತಂತ್ರಜ್ಞಾನ ಉಪಕ್ರಮ (ಐಕ್ಯುಟಿಐ) ಆಯೋಜಿಸಿದ್ದ ‘ಕ್ವಾಂಟಮ್ ಇಂಡಿಯಾ ಬೆಂಗಳೂರು’ ಎರಡು ದಿನಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಟಾರ್ಟ್ ಅಪ್‌ಗಳ ಬೆಳವಣಿಗೆಗೆ ನೆರವು ನೀಡಲು ಕ್ವಾಂಟಮ್ ವೆಂಚರ್ ಕ್ಯಾಪಿಟಲ್ ಫಂಡ್ ಪ್ರಾರಂಭಿಸಲಾಗುವುದು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದಂತಹ ಕ್ರಮಗಳಿಂದಾಗಿ ಕರ್ನಾಟಕ ರಾಜ್ಯವನ್ನು ಜಾಗತಿಕ ಕ್ವಾಂಟಮ್ ಕೇಂದ್ರ ಮಾಡಲಾಗುವುದು. 2035ರ ವೇಳೆಗೆ 10 ಸಾವಿರ ಉದ್ಯೋಗ ಸೃಷ್ಟಿಸಿ, ಬೆಂಗಳೂರು ಅನ್ನು ಏಷ್ಯಾದ ಕ್ವಾಂಟಮ್ ರಾಜಧಾನಿ ಮಾಡುವ ಗುರಿ ಇದೆ. ₹1.75 ಲಕ್ಷ ಕೋಟಿ ಮೌಲ್ಯದ ಕ್ವಾಂಟಮ್ ಆರ್ಥಿಕತೆ ಸೃಷ್ಟಿಸಲಾಗುವುದು ಎಂದು ಹೇಳಿದರು.
ಐ.ಟಿ, ಜೈವಿಕ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಸಮರ್ಥವಾಗಿರುವ ಕರ್ನಾಟಕ, ದೇಶದ ತಂತ್ರಜ್ಞಾನ ಮತ್ತು ನಾವೀನ್ಯತೆಯ ರಾಜಧಾನಿಯಾಗಿದೆ. ಸಾಮಾನ್ಯ ನಾಗರಿಕರಿಗೆ ಕ್ವಾಂಟಮ್ ಹೇಗೆ ಪ್ರಯೋಜನಕಾರಿ ಎಂದು ಕೆಲವರು ಕೇಳಬಹುದು. ಪ್ರಾರಂಭಿಕ ಹಂತದಲ್ಲಿ ರೋಗಗಳ ಪತ್ತೆಗೆ, ಸುರಕ್ಷಿತ ಸಂವಹನ ಹಾಗೂ ಸ್ಮಾರ್ಟ್ ಕೃಷಿಯನ್ನು ಸಾಧ್ಯವಾಗಿಸುತ್ತದೆ ಎಂದರು.
ದೇಶದ ಕ್ವಾಂಟಮ್ ಕ್ರಾಂತಿಯನ್ನು ಕರ್ನಾಟಕ ಮುನ್ನಡೆಸುವುದನ್ನು ಖಾತ್ರಿಪಡಿಸಲು ಐದು ಪ್ರಮುಖ ಸ್ತಂಭಗಳ ಮೇಲೆ ಕಾರ್ಯತಂತ್ರ ರೂಪಿಸಲಾಗಿದೆ. ಇಪ್ಪತ್ತಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕ್ವಾಂಟಮ್ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸಿ, ಪ್ರತಿ ವರ್ಷ 150 ಪಿಎಚ್. ಡಿ ಫೆಲೋಶಿಪ್‌ಗಳಿಗೆ ನೆರವು ನೀಡಲಾಗುವುದು. 1000- ಕ್ಯುಬಿಟ್ ಪ್ರೊಸೆಸರ್‌ಗಳನ್ನು ಒಳಗೊಂಡಂತೆ ಅತ್ಯಾಧುನಿಕ ಕ್ವಾಂಟಮ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು. ಆರೋಗ್ಯ ರಕ್ಷಣೆ, ರಕ್ಷಣಾ ಮತ್ತು ಸೈಬರ್ ಭದ್ರತೆ ಹಾಗೂ ಕ್ವಾಂಟಮ್ ಘಟಕಗಳ ಸ್ಥಳೀಯ ಉತ್ಪಾದನೆ ಉತ್ತೇಜಿಸಲು ಮೀಸಲಾದ ಫ್ಯಾಬ್ ಲೈನ್ ಅನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಕ್ವಾಂಟಮ್ ಕ್ಲಸ್ಟರ್ ಆರಂಭಿಸಲಾಗುತ್ತಿದ್ದು, ಶೀಘ್ರವೇ ಬೆಂಗಳೂರು ಕ್ವಾಂಟಮ್ ತಂತ್ರಜ್ಞಾನದ ರಾಜಧಾನಿಯಾಗಲಿದೆ. ಎರಡು ಹಾಗೂ ಮೂರನೇ ಹಂತದ ನಗರಗಳು ಕೂಡ ಅತ್ಯುತ್ತಮ ಮಾನವ ಸಂಪನ್ಮೂಲ ಹಾಗೂ ಮೂಲಸೌಕರ್ಯ ನೀಡಲಿದ್ದು, ಈ ಭಾಗಗಳತ್ತಲೂ ಉದ್ಯಮಿಗಳು ಗಮನಹರಿಸಬಹುದು ಎಂದು ಸಲಹೆ ನೀಡಿದರು.
ಇದೇ ವೇಳೆ ನೋಬಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಡಂಕನ್ ಹಲ್ದಾನೆ, ಪ್ರೊ. ಡೇವಿಡ್ ಗ್ರಾಸ್ ಹಾಗೂ ಪಂಚರತ್ನಂ ಪ್ರಶಸ್ತಿ ವಿಜೇತ ರಾಜಮಣಿ ವಿಜಯ ರಾಘವನ್ ಅವರನ್ನು ಸಿದ್ದರಾಮಯ್ಯ ಸನ್ಮಾನಿಸಿದರು.
ಸಮಾವೇಶದಲ್ಲಿ ದೇಶ, ವಿದೇಶಗಳಿಂದ 700ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ಕ್ವಾಂಟಮ್ ವಿಜ್ಞಾನಕ್ಕೆ ಸಂಬಂಧಿಸಿದಂತೆ 31 ಮಳಿಗೆಗಳನ್ನು ತೆರೆಯಲಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಸಮ್ಮೇಳನದ ಅಧ್ಯಕ್ಷ ಪ್ರೊ. ಅರಿಂದಮ್ ಘೋಷ್, ಪ್ರಾಧ್ಯಾಪಕರಾದ ಅಕ್ಷಯ್ ನಾಯಕ್, ಸ್ಮಿತಾ ವಿಶ್ವೇಶ್ವರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.