ADVERTISEMENT

ನೀರು ನುಗ್ಗಿದ ಹೊಲಗಳಿಗೂ ₹10 ಸಾವಿರ ಪರಿಹಾರ ಕೊಡಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:29 IST
Last Updated 24 ನವೆಂಬರ್ 2021, 20:29 IST
ಶಿವಕುಮಾರ್
ಶಿವಕುಮಾರ್   

ಬೆಂಗಳೂರು: ‘ಅಕಾಲಿಕ ಮಳೆಯಿಂದಾಗಿ ನೀರು ನುಗ್ಗಿದ ಮನೆಗಳಿಗೆ ₹ 10 ಸಾವಿರ ಪರಿಹಾರ ಘೋಷಿಸಿದಂತೆ, ನೀರು ನುಗ್ಗಿರುವ ಹೊಲಗಳಿಗೂ ಎಕರೆಗೆ ತಲಾ ₹ 10 ಸಾವಿರದಂತೆ ಪರಿಹಾರ ಘೋಷಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ರಾಜ್ಯ‍ಪಾಲರನ್ನು ಗುರುವಾರ ಭೇಟಿ ಮಾಡಿ ರೈತರ ನೆರವಿಗೆ ಧಾವಿಸುವಂತೆ ಮನವಿ ಮಾಡಲಾಗುವುದು’ ಎಂದರು.

‘ಬೆಳೆ ನಾಶ ಸಮೀಕ್ಷೆ, ಅಧ್ಯಯನದ ಬಳಿಕ ಪರಿಹಾರ ನೀಡುವುದಾಗಿ ಹೇಳಿಕೊಂಡು ಸರ್ಕಾರ ಕಾಲಹರಣ ಮಾಡಬಾರದು. ತಹಶೀಲ್ದಾರ್‌ಗಳ ಮೂಲಕ ರೈತರಿಂದ ತಕ್ಷಣ ಅರ್ಜಿ ಆಹ್ವಾನಿಸಿ, ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ವಿಡಿಯೊ, ಭಾವಚಿತ್ರ ತೆಗೆಸಿ, 30 ದಿನಗಳ ಒಳಗೆ ಪರಿಹಾರ ನೀಡಬೇಕು’ ಎಂದು ಅವರು ಆಗ್ರಹಿಸಿದರು. ಅಲ್ಲದೆ, ಅರ್ಜಿ ಸಲ್ಲಿಸುವ ರೈತರಿಗೆ ನೆರವಾಗುವಂತೆ ಕಾಂಗ್ರೆಸ್‌ ಕಾರ್ಯಕರ್ತರಲ್ಲೂ ಮನವಿ ಮಾಡಿದರು.

ADVERTISEMENT

‘ಮನೆ ಸಂಪೂರ್ಣವಾಗಿ ಕಳೆದುಕೊಂಡವರಿಗೆ ಪುನರ್ವಸತಿ ಕೇಂದ್ರಗಳನ್ನು ಕಲ್ಪಿಸಬೇಕು. ಬೆಳೆ, ಜಮೀನು ಹಾನಿ ಆಗಿರುವ ರೈತರಿಗೆ ಕಂದಾಯ ಮನ್ನಾ ಮಾಡಬೇಕು. ಪರಿಹಾರ ನೀಡದ ವಿಮೆ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದೂ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.