ಮಡಿಕೇರಿ/ ಮಂಗಳೂರು: ಕರಾವಳಿಗೆ ಮುಂಗಾರು ಪ್ರವೇಶಿಸಿದ ಮರುದಿನವೇ ರಾಜ್ಯದಾದ್ಯಂತ ಜೋರು ಮಳೆ ಸುರಿದು ಹರುಷ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಮುಂಗಾರುಪೂರ್ವ ಮಳೆಯಿಂದಾಗಿ ಬಿಸಿಲ ಬೇಗೆ ಕಡಿಮೆಯಾಗಿತ್ತು. ಈಗ, ಆರಂಭದ ದಿನಗಳಲ್ಲಿಯೇ ಮುಂಗಾರು ಸಮೃದ್ಧವಾಗಿ ಸುರಿಯುವ ಸೂಚನೆ ನೀಡಿದ್ದು ನಾಡಿನ ಜನರಲ್ಲಿ ನಿರಾಳ ಭಾವ ಮೂಡಿಸಿದೆ.
ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಜಲಾಶಯ ಮುಂಗಾರುಪೂರ್ವ ಮಳೆಗೇ ಭರ್ತಿಯಾಗಿದೆ. ಭಾನುವಾರ ಜಲಾಶಯದ 5 ಕ್ರಸ್ಟ್ ಗೇಟ್‌ಗಳ ಮೂಲಕ 2,500 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು. ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮ ಇತ್ತೀಚಿನ ದಶಕಗಳಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿಯೇ ತುಂಬಿ ಹರಿಯುತ್ತಿದೆ. ಪಿಂಡಪ್ರದಾನ ಸ್ಥಳ, ಪುಷ್ಪೋದ್ಯಾನ ಮುಳುಗಡೆಯಾಗಿದ್ದು, ನೀರು ರಸ್ತೆಗಳಿಗೆ ಬಂದಿದೆ. ಆದರೆ, ಮೇಲ್ಸೇತುವೆ ಇರುವುದರಿಂದ ದ್ವೀಪವಾಗುವಂತಹ ಪರಿಸ್ಥಿತಿ ಇಲ್ಲ.
ಕೊಡಗು ಜಿಲ್ಲೆಯಾದ್ಯಂತ ಮಳೆ ಸುರಿದಿದೆ. ಹಾಸನ ಜಿಲ್ಲೆಯಾದ್ಯಂತ ಜಡಿ ಮಳೆ ಶುರುವಾಗಿದ್ದು, ಸಕಲೇಶಪುರ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ.
ಶಿರಾಡಿ ಘಾಟ್‌ನ ದೋಣಿಗಲ್ ಬಳಿ ರಸ್ತೆ ಪಕ್ಕದ ಮಣ್ಣು ಕುಸಿಯುತ್ತಿದ್ದು, ಮೇಲ್ಭಾಗದಲ್ಲಿರುವ ಕಾಫಿ, ಸಿಲ್ವರ್ ಹಾಗೂ ಇತರ ಮರಗಳು ಬೇರು ಸಮೇತ ನೆಲಕ್ಕುರುಳಿವೆ. ರಸ್ತೆಯಲ್ಲಿ ಮಣ್ಣು ಬಿದ್ದಿದ್ದರಿಂದ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾನುವಾರ ಭಾರಿ ಗಾಳಿಯೊಂದಿಗೆ ಮುಸಲಧಾರೆಯಾಗಿದ್ದು ಗ್ರಾಮೀಣ ಭಾಗದ ಹಲವು ಪ್ರದೇಶಗಳು ಜಲಾವೃತವಾಗಿವೆ. ಚಿಕ್ಕಮಗಳೂರು ಮೂರು ಕಡೆ ಕಾರುಗಳು ಹಳ್ಳಕ್ಕೆ ಉರುಳಿವೆ. ಆಟೋರಿಕ್ಷಾದ ಮೇಲೆ ಮರ ಬಿದ್ದು ಚಾಲಕ ಮೃತಪಟ್ಟಿದ್ದಾರೆ. ಕೊಪ್ಪ ತಾಲ್ಲೂಕಿನ ಭೈರೆದೇವರು ಗ್ರಾಮದ ಶಿಡ್ಲೆಮನೆಯ ಆಟೋ ಚಾಲಕ ರತ್ನಾಕರ ಹೆಗ್ಡೆ (45) ಮೃತಪಟ್ಟವರು.
ಬೆಂಗಳೂರು: ರಾಜ್ಯದ ಕರಾವಳಿಗೆ ಮುಂಗಾರು ಪ್ರವೇಶ ವಾಗಿರುವುದರಿಂದ ವಿವಿಧೆಡೆ ಮುಂದಿನ ಒಂದು ವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ–ಮಲೆನಾಡು ಭಾಗದ ಆರು ಜಿಲ್ಲೆಗಳಿಗೆ ಸೋಮವಾರ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.
ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ‘ರೆಡ್’ ಅಲರ್ಟ್ ನೀಡಲಾಗಿದೆ. ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ ಹಾಗೂ ಧಾರವಾಡಕ್ಕೆ ‘ಆರೆಂಜ್ ಅಲರ್ಟ್’ ನೀಡಲಾಗಿದ್ದು, ಕೆಲವೆಡೆ ಭಾರಿ ಮಳೆಯಾಗುವ ಸಂಭವವಿದೆ.
ವಿಜಯಪುರ, ಬಾಗಲಕೋಟೆ, ಗದಗ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಧಾರಾಕಾರ, ಭಾರಿ ಮಳೆಯ ಮುನ್ಸೂಚನೆ ನೀಡಲಾದ ಜಿಲ್ಲೆಗಳಲ್ಲಿ ಹಲವೆಡೆ ಗಂಟೆಗೆ
40– 50 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು. ಕೊಂಕಣ, ಗೋವಾ, ಕರ್ನಾಟಕದ ಕರಾವಳಿ ಮತ್ತು ಪೂರ್ವ– ಮಧ್ಯ ಅರಬ್ಬಿ ಸಮುದ್ರದ ಕೆಲವೆಡೆ ಗಂಟೆಗೆ 60 ಕಿ.ಮೀ.ವರೆಗೂ ಗಾಳಿ ಬೀಸಬಹುದು.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಹಾಗೂ ಭಾರಿ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳದಲ್ಲಿ ಸರಾಸರಿ 5 ಸೆ.ಮೀನಿಂದ 15 ಸೆ.ಮೀ. ಮಳೆ
ಅಲಪ್ಪುಳ, ಪತ್ತನಂತಿಟ್ಟ, ಕೊಟ್ಟಾಯಂ, ಪಾಲಕ್ಕಾಡ್,
ವಯನಾಡ್‌ನಲ್ಲಿ ಗಂಟೆಗೆ 40 ಕಿ.ಮೀ. ವೇಗವಾಗಿ ಬೀಸಿದ ಗಾಳಿ
ದೆಹಲಿ, ಗುಜರಾತ್‌ನ ಹಲವೆಡೆ ಮಳೆ
ಮಹಾರಾಷ್ಟ್ರಕ್ಕೆ ಕಾಲಿಟ್ಟ ಮುಂಗಾರು
ಕಳೆದೆರಡು ದಿನಗಳಿಂದ ಮುಂಬೈ, ಕೊಂಕಣತೀರದಲ್ಲಿ ಭಾರಿ ಮಳೆ
ಮಿಜೋರಾಂ, ಮಣಿಪುರ ಹಾಗೂ ನಾಗಾಲ್ಯಾಂಡ್‌ಗೂ ಮುಂಗಾರು ಪ್ರವೇಶ:
ಐಎಂಡಿ
ರಾಜಸ್ಥಾನದ ಖೈರತಾಲ್–ತಿಜಾರಾ ಜಿಲ್ಲೆಯಲ್ಲಿ ಮನೆ ಕುಸಿದು ತಾಯಿ–ಮಗಳು ಸಾವು
ಬಿಕಾನೇರ್, ಸಿಕಾರ್, ಜುಂಜುನು ಜಿಲ್ಲೆಯಲ್ಲಿ ಬುಡಸಮೇತ ಉರುಳಿಬಿದ್ದ ವಿದ್ಯುತ್ ಕಂಬಗಳು
ರಾಜಸ್ಥಾನದ ಬಾರ್ಮೇಡ್, ಜೈಸಲ್ಮೇರ್ ಜಿಲ್ಲೆಗಳಲ್ಲಿ ದೂಳಿನ ಬಿರುಗಾಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.