ADVERTISEMENT

Karnataka Rains | ರಾಜ್ಯದ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 16:10 IST
Last Updated 17 ಮೇ 2025, 16:10 IST
ಹೊಳಲ್ಕೆರೆ ತಾಲ್ಲೂಕಿನ ತಾಳ್ಯದಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಕರಿಯಮ್ಮನ ಹಳ್ಳ ತುಂಬಿ ಹರಿದ ಕಾರಣ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು
ಹೊಳಲ್ಕೆರೆ ತಾಲ್ಲೂಕಿನ ತಾಳ್ಯದಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಕರಿಯಮ್ಮನ ಹಳ್ಳ ತುಂಬಿ ಹರಿದ ಕಾರಣ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು   

ಬೆಂಗಳೂರು: ರಾಜಧಾನಿಯು ಸೇರಿ ರಾಜ್ಯದ ಹಲವೆಡೆ ಶನಿವಾರ ಧಾರಾಕಾರ ಮಳೆ ಸುರಿದಿದೆ.

ದಾವಣಗೆರೆ ವರದಿ: ನಗರವೂ ಸೇರಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಯಿತು. ಹೊನ್ನಾಳಿ, ಚನ್ನಗಿರಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕಿನ ಮಾಯಕೊಂಡದಲ್ಲಿ ಮಳೆಯಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. 

ಚಿಕ್ಕಮಗಳೂರು ವರದಿ: ಜಿಲ್ಲೆಯಲ್ಲಿ ಶನಿವಾರ ಮಳೆ ಮುಂದುವರಿದಿದ್ದು, ದಿನವಿಡಿ ಮಳೆಯ ವಾತಾವರಣ ಇತ್ತು. ನಗರದಲ್ಲಿ ಸತತ ಆರು ದಿನಗಳಿಂದ ಮಧ್ಯಾಹ್ನದ ವೇಳೆಗೆ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರ, ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬೆಳಿಗ್ಗೆ 11ರ ವೇಳೆಗೆ ಆರಂಭವಾದ ಮಳೆ 1 ಗಂಟೆಗೂ ಹೆಚ್ಚು ಕಾಲ ಸುರಿಯಿತು. 

ADVERTISEMENT

ನರಸಿಂಹರಾಜಪುರ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿದೆ.

ಚಿತ್ರದುರ್ಗ ವರದಿ: ಜಿಲ್ಲೆಯ ಹೊಸದುರ್ಗ, ಚಿಕ್ಕಜಾಜೂರು ಹಾಗೂ ಸಾಣೇಹಳ್ಳಿಯಲ್ಲಿ ಗಂಟೆಗೂ ಹೆಚ್ಚು ಹೊತ್ತು ರಭಸವಾಗಿ ಮಳೆ ಸುರಿಯಿತು. ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಭಾಗದಲ್ಲಿ ಸುರಿದ ಬಿರುಸಿನ ಮಳೆಗೆ ಹಳ್ಳ, ಕೊಳ್ಳಗಳು ತುಂಬಿ ಹರಿದವು.

ಶಿವಮೊಗ್ಗ ವರದಿ: ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನದಿಂದ ಮಳೆ ಸುರಿದಿದೆ. ಇಡೀ ದಿನ ಮೋಡ ಕವಿದ ವಾತಾವರಣ ಇದ್ದು, ಜಡಿ ಮಳೆಯಿಂದ ಅವಧಿಗೆ ಮುನ್ನವೇ ಮುಂಗಾರು ಹಂಗಾಮು ಆರಂಭವಾದ ಅನುಭವವನ್ನು ನೀಡಿತು. ತೀರ್ಥಹಳ್ಳಿ, ಕೋಣಂದೂರು, ರಿಪ್ಪನ್‌ಪೇಟೆ, ಹೊಳೆಹೊನ್ನೂರು, ಶಿಕಾರಿಪುರದ ಗ್ರಾಮೀಣ ಭಾಗದಲ್ಲಿ ಮಳೆ ಬಂದಿದೆ. 

ಬಂಗಾರಪೇಟೆ/ಕೆಜಿಎಫ್‌ ವರದಿ: ಬಂಗಾರಪೇಟೆ ತಾಲ್ಲೂಕಿನ ವಿವಿಧೆಡೆ ಶನಿವಾರ ಭಾರಿ ಮಳೆ ಸುರಿಯಿತು. ಕೆಜಿಎಫ್‌ ಬಿಜಿಎಂಎಲ್‌ ಪ್ರದೇಶದ ಎನ್‌.ಟಿ ಬ್ಲಾಕ್‌ನಲ್ಲಿ ಎರಡು ಮನೆಗಳ ಮೇಲೆ ಮರ ಬಿದ್ದು ಮನೆಗಳು ಜಖಂಗೊಂಡಿವೆ. ಹಣ್ಣು ಮತ್ತು ತರಕಾರಿ ತೋಟಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಮುಳಬಾಗಿಲು ಸುತ್ತಮುತ್ತ ಉತ್ತಮ ಮಳೆ ಸುರಿಯಿತು.

ಚಿಕ್ಕಬಳ್ಳಾಪುರ ವರದಿ: ಗೌರಿಬಿದನೂರು ತಾಲ್ಲೂಕಿನಲ್ಲಿ ಶನಿವಾರ ಸಂಜೆ ಮಳೆ ಸುರಿಯಿತು. ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದ ಕೆಳ ಸೇತುವೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಿದರು. ಆನೇಕಲ್‌ ಸುತ್ತಮುತ್ತ ಭಾರಿ ಮಳೆ ಆಗಿದೆ.

ನಾಗಮಂಗಲ: ಗುಡುಗು–ಸಿಡಿಲಿನ ಮಳೆ

ಮೈಸೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಶನಿವಾರ ಮಧ್ಯಾಹ್ನ ಎರಡೂವರೆ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಹೆದ್ದಾರಿ ಬದಿಯಲ್ಲಿ ಮಳೆಯ ನೀರು ಕಾಲುವೆಯಂತೆ ಹರಿಯಿತು. ವಿದ್ಯಾರ್ಥಿಗಳು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಯಿತು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಮೈಸೂರು ಜಿಲ್ಲಾ ಕೇಂದ್ರದಲ್ಲಿ ಕೆಲಹೊತ್ತು ಗುಡುಗು ಸಹಿತ ಜೋರು ಮಳೆ ಸುರಿಯಿತು. ಜಿಲ್ಲೆಯ ತಿ.ನರಸೀಪುರ ಎಚ್‌.ಡಿ. ಕೋಟೆ ಧರ್ಮಾಪುರ ಬೆಟ್ಟದಪುರ ಪಿರಿಯಾಪಟ್ಟಣ ಹಂಪಾಪುರ ನಂಜನಗೂಡು ಸಾಲಿಗ್ರಾಮ ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.