ADVERTISEMENT

Karnataka Rains– ರಾಜ್ಯದಲ್ಲಿ ಮಳೆ ಬಿರುಸು: ದೇವಸ್ಥಾನಗಳು ಜಲಾವೃತ, ಕಂಬ–ಮರಗಳು ಧರೆಗೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 19:35 IST
Last Updated 19 ಜುಲೈ 2023, 19:35 IST
   
ಬೆಂಗಳೂರು: ಕಿತ್ತೂರು ಕರ್ನಾಟಕ, ಮಲೆನಾಡು ಭಾಗದಲ್ಲಿ ಮಳೆ ಆರ್ಭಟಿಸಿದ್ದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ತುಸು ತಗ್ಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು, ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಂಗಳವಾರ ರಾತ್ರಿಯಿಂದ ಆರಂಭವಾದ ಮಳೆ ಬುಧವಾರ ಬಿಟ್ಟು ಬಿಡದೆ ಸುರಿಯಿತು. ಕೊಪ್ಪ, ಶೃಂಗೇರಿ, ಮೂಡಿಗೆರೆ, ಕೊಟ್ಟಿಗೆಹಾರ, ಆಲ್ದೂರು, ಎನ್‌.ಆರ್‌.ಪುರ, ಕಳಸ, ಬಾಳೆಹೊನ್ನೂರು ಭಾಗದಲ್ಲಿ ಎಡಬಿಡದೆ ಸುರಿಯುತ್ತಿದೆ.

ಮಲೆನಾಡಿನ ಭಾಗಕ್ಕೆ ಜೀವ ಕಳೆ ಬಂದಂತಾಗಿದೆ. ಒಂದೂವರೆ ತಿಂಗಳ ಹಿಂದೆಯೇ ಆರಂಭವಾಗಬೇಕಿದ್ದ ಮಳೆ, ತಡವಾಗಿಯಾದರೂ ಆರಂಭವಾಗಿರುವುದು ಈ ಭಾಗದ ಜನರಲ್ಲಿ ಸಂತಸದ ಮೂಡಿಸಿದೆ. ಜಿಲ್ಲೆಯಲ್ಲಿ ಇನ್ನೂ ಐದು ದಿನ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದ್ದು, ‘ಯೆಲ್ಲೊ ಅಲರ್ಟ್’ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ADVERTISEMENT

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಳೆ ತುಸು ತಗ್ಗಿದೆ. ಕಲಬುರಗಿ, ರಾಯಚೂರಿನಲ್ಲಿ ಆಗಾಗ ತುಂತುರು ಮಳೆಯಾಗಿದೆ. ಕೊಪ್ಪಳದಲ್ಲಿ ಜಿಟಿ ಜಿಟಿ ಮಳೆಯಾಗಿದೆ.

ಬೀದರ್‌ ಜಿಲ್ಲೆಯ ಬಹುತೇಕ ಕಡೆ ಜಿಟಿಜಿಟಿ ಮಳೆಯಾಗಿದೆ. ಸತತ ಮಳೆಗೆ ಹುಮನಾಬಾದ್‌ ತಾಲ್ಲೂಕಿನ ಕಠಳ್ಳಿ ಗ್ರಾಮದಲ್ಲಿ ಅಮೃತ ಅವರ ಮನೆ ಗೋಡೆ ಕುಸಿದು ಬಿದ್ದಿದೆ.

ಬೆಳಗಾವಿ, ಉತ್ತರಕನ್ನಡ, ಹುಬ್ಬಳ್ಳಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಜೋರು ಮಳೆಯಾಗಿದೆ.

ಧಾರವಾಡ ತಾಲ್ಲೂಕಿನ ಬೊಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಸೀಲಿಂಗ್ ಕುಸಿದು ವಿದ್ಯಾರ್ಥಿಯೊಬ್ಬನಿಗೆ ಗಾಯವಾಗಿದೆ. ಬಾಗಲಕೋಟೆ ಜಿಲ್ಲೆಯ ಸಾವಳಗಿಯಲ್ಲಿ ಮನೆ ಚಾವಣಿ ಕುಸಿದು ತಾಯಿ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಮಳೆ, ಬಿರುಗಾಳಿಗೆ 20ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, ಹಲವು ಮರಗಳು ಧರೆಗುರುಳಿವೆ.

ಧಾರವಾಡದ ಸನ್ಮತಿನಗರದಲ್ಲಿ ಗಾಳಿ, ಮಳೆಗೆ ವಿದ್ಯುತ್‌ ಕಂಬ ಬಿದ್ದು ಕಾರು ಜಖಂಗೊಂಡಿದೆ. ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ತರಕಾರಿ ಬೆಳೆ ನೆಲಕಚ್ಚಿವೆ. ಹುಬ್ಬಳ್ಳಿ ನಗರ ಹಾಗೂ ತಾಲ್ಲೂಕಿನಲ್ಲಿ ದಿನವಿಡೀ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಹುತೇಕ ಕಡೆ ಸತತ ಮಳೆಯಾಗಿದೆ.

ಬೆಳಗಾವಿ ನಗರ ಹಾಗೂ ಜಿಲ್ಲೆಯ ಎಲ್ಲೆಡೆ ಧಾರಾಕಾರ ಮಳೆಯಾಗಿದ್ದು, ನದಿಗಳ ನೀರಿನ ಹರಿವು ಹೆಚ್ಚಿದೆ. ಜಲಾಶಯಗಳ ನೀರಿನ ಪ್ರಮಾಣವೂ ಏರಿಕೆಯಾಗಿದೆ. ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಒಳಹರಿವು 13,753 ಕ್ಯುಸೆಕ್‌ ಏರಿದ್ದು, ನವಿಲುತೀರ್ಥದ ರೇಣುಕಾಸಾಗರ ಜಲಾಶಯದಲ್ಲೂ 3,851 ಕ್ಯುಸೆಕ್‌ ಒಳಹರಿವು ದಾಖಲಾಗಿದೆ.

ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಯಮಕನಮರಡಿ ಸಮೀಪದ ಹುನ್ನೂರಿನ ವಿಠ್ಠಲ– ರುಕ್ಮಿಣಿ ಮಂದಿರ, ಎಂ.ಕೆ.ಹುಬ್ಬಳ್ಳಿಯ ಗಂಗಾಂಬಿಕಾ ಐಕ್ಯಮಂಟಪ, ಖಾನಾಪುರ ತಾಲ್ಲೂಕಿನ ಹೆಬ್ಬನಟ್ಟಿಯ ಮಾರುತಿ ಮಂದಿರಗಳು ಜಲಾವೃತಗೊಂಡಿವೆ.

ಖಾನಾಪುರ ಅರಣ್ಯ ಪ್ರದೇಶದಲ್ಲಿ ಬಿರುಗಾಳಿ ಮಳೆಗೆ ವಿದ್ಯುತ್‌ ಕಂಬಗಳು, ಹಲವು ಮರಗಳು ಧರೆಗುರುಳಿವೆ. ಲೋಂಡಾ, ಕಣಕುಂಬಿ, ಭೀಮಘಡ ಮತ್ತು ಜಾಂಬೋಟಿ‌ ಭಾಗದ ವಿವಿಧ ಗ್ರಾಮಗಳಿಗೆ ವಿದ್ಯುತ್‌ ಕಡಿತ ಮಾಡಲಾಗಿದೆ. ಮಲಪ್ರಭೆಯ ನೀರು ಸೇತುವೆ ಮೇಲೆ ಹರಿದಿದ್ದರಿಂದ ಖಾನಾಪುರ– ಅನಮೋಡ ಮಾರ್ಗದ ಸಂಚಾರ ಬಂದ್‌ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ, ಶಿರಸಿಯಲ್ಲಿ ಧಾರಾಕಾರ ಮಳೆಯಾಗಿದೆ. ಅಘನಾಶಿನಿ, ಶಾಲ್ಮಲಾ, ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಜೊಯಿಡಾ ತಾಲ್ಲೂಕಿನ ಕದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ 14,516 ಕ್ಯುಸೆಕ್‍ಗೆ ಏರಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ದಿನವಿಡೀ ಜಿಟಿ ಜಿಟಿ ಮಳೆಯಾಗಿದ್ದು ಹರಪನಹಳ್ಳಿಯಲ್ಲಿ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿವೆ.

ದೇವಸ್ಥಾನಗಳು ಜಲಾವೃತ, ಕಂಬ–ಮರಗಳು ಧರೆಗೆ

ಹುಬ್ಬಳ್ಳಿ: ಬೆಳಗಾವಿ, ಉತ್ತರಕನ್ನಡ, ಹುಬ್ಬಳ್ಳಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಬುಧವಾರ ವ್ಯಾಪಕವಾಗಿ ಮಳೆಯಾಗಿದೆ.

ಧಾರವಾಡ ತಾಲ್ಲೂಕಿನ ಬೊಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಸೀಲಿಂಗ್ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಗಲಕೋಟೆ ಜಿಲ್ಲೆಯ ಸಾವಳಗಿಯಲ್ಲಿ ಮನೆ ಛಾವಣಿ ಕುಸಿದು ತಾಯಿ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಮಳೆ, ಬಿರುಗಾಳಿಗೆ 20ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, ಹಲವು ಮರಗಳು ಧರೆಗುರುಳಿವೆ.

ಧಾರವಾಡದ ಸನ್ಮತಿನಗರದಲ್ಲಿ ಗಾಳಿ, ಮಳೆಗೆ ಕಾರಿನ ಮೇಲೆ ವಿದ್ಯುತ್‌ ಕಂಬ ಬಿದ್ದು ಜಖಂಗೊಂಡಿದೆ. ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ರೈತರ ತರಕಾರಿ ಬೆಳೆ ನೆಲಕಚ್ಚಿವೆ. ಹುಬ್ಬಳ್ಳಿ ನಗರ ಹಾಗೂ ತಾಲ್ಲೂಕಿನಲ್ಲಿ ದಿನವಿಡೀ ಮಳೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ 7.1 ಸೆಂ.ಮೀ. ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಹುತೇಕ ಕಡೆ ಸತತ ಮಳೆಯಾಗಿದೆ.

ಬೆಳಗಾವಿ ನಗರ ಹಾಗೂ ಜಿಲ್ಲೆಯ ಎಲ್ಲೆಡೆ ಧಾರಾಕಾರ ಮಳೆಯಾಗಿದ್ದು, ನದಿಗಳ ನೀರಿನ ಹರಿವು ಹೆಚ್ಚಿದೆ. ಜಲಾಶಯಗಳ ನೀರಿನ ಪ್ರಮಾಣವೂ ಏರಿಕೆಯಾಗಿದೆ. ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಒಳಹರಿವು 13,753 ಕ್ಯುಸೆಕ್‌ ಏರಿದ್ದು, ನವಿಲುತೀರ್ಥದ ರೇಣುಕಾಸಾಗರ ಜಲಾಶಯದಲ್ಲೂ 3,851 ಕ್ಯುಸೆಕ್‌ ಒಳಹರಿವು ದಾಖಲಾಗಿದೆ.

ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಯಮಕನಮರಡಿ ಸಮೀಪದ ಹುನ್ನೂರಿನ ವಿಠ್ಠಲ– ರುಕ್ಮಿಣಿ ಮಂದಿರ, ಎಂ.ಕೆ.ಹುಬ್ಬಳ್ಳಿಯ ಗಂಗಾಂಬಿಕಾ ಐಕ್ಯಮಂಟಪ, ಖಾನಾಪುರ ತಾಲ್ಲೂಕಿನ ಹೆಬ್ಬನಟ್ಟಿಯ ಮಾರುತಿ ಮಂದಿರಗಳು ಜಲಾವೃತಗೊಂಡಿವೆ.

ಖಾನಾಪುರ ಅರಣ್ಯ ಪ್ರದೇಶದಲ್ಲಿ ಬಿರುಗಾಳಿ ಮಳೆಗೆ ವಿದ್ಯುತ್‌ ಕಂಬಗಳು, ಹಲವು ಮರಗಳು ಧರೆಗುರುಳಿವೆ. ಲೋಂಡಾ, ಕಣಕುಂಬಿ, ಭೀಮಘಡ ಮತ್ತು ಜಾಂಬೋಟಿ‌ ಭಾಗದ ವಿವಿಧ ಗ್ರಾಮಗಳಿಗೆ ವಿದ್ಯುತ್‌ ಕಡಿತ ಮಾಡಲಾಗಿದೆ. ಮಲಪ್ರಭೆಯ ನೀರು ಸೇತುವೆ ಮೇಲೆ ಹರಿದಿದ್ದರಿಂದ ಖಾನಾಪುರ– ಅನಮೋಡ ಮಾರ್ಗದ ಸಂಚಾರ ಬಂದ್‌ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ, ಶಿರಸಿಯಲ್ಲಿ ಧಾರಾಕಾರ ಮಳೆಯಾಗಿದೆ. ಅಘನಾಶಿನಿ, ಶಾಲ್ಮಲಾ, ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಜೊಯಿಡಾ ತಾಲ್ಲೂಕಿನ ಸೂಪಾ ಜಲಾಶಯದಲ್ಲಿ ಬುಧವಾರ ಒಳಹರಿವು 28,320 ಕ್ಯುಸೆಕ್‍ಗೆ ಏರಿಕೆ ಆಗಿದೆ. ಕದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ 14,516 ಕ್ಯುಸೆಕ್‍ಗೆ ಏರಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ದಿನವಿಡೀ ಜಿಟಿ ಜಿಟಿ ಮಳೆಯಾಗಿದ್ದು ಹರಪನಹಳ್ಳಿಯಲ್ಲಿ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.