ADVERTISEMENT

ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಮೇ 2023, 14:30 IST
Last Updated 5 ಮೇ 2023, 14:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ ಎರಡು ದಿನಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ವ್ಯಾಪ್ತಿಯ ಜಿಲ್ಲೆಗಳ ಅಲ್ಲಲ್ಲಿ, ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್‌, ಗದಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಸೂಚನೆ ನೀಡಿದೆ.

ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆಲ್ಸಿಯಸ್‌ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ಸ್‌ನಷ್ಟು ತಗ್ಗುವ ಸಾಧ್ಯತೆಯಿದೆ.

ADVERTISEMENT

ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾಜಧಾನಿಯ ಉಷ್ಣಾಂಶವು ಗರಿಷ್ಠ 31 ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಶುಕ್ರವಾರ ಕಾರವಾರದಲ್ಲಿ 36.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಅನ್ವಯಿಸಿದಂತೆ ಬಳ್ಳಾರಿಯ ಹಗರಿ ಕೆ.ವಿ.ಕೆಯಲ್ಲಿ 7 ಸೆಂ.ಮೀ, ತುಮಕೂರಿನ ಮಿಡಿಗೇಶಿ, ಬೆಂಗಳೂರಿನಲ್ಲಿ ತಲಾ 4 ಸೆಂ.ಮೀ ಮಳೆ ಸುರಿದಿತ್ತು. ಕಲಬುರಗಿಯ ಚಿತ್ತಾಪುರ, ಬಳ್ಳಾರಿಯ ಕುರುಗೋಡು, ಚಿತ್ರದುರ್ಗದ ಪರಶುರಾಂಪುರ, ರಾಮನಗರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಕೋಲಾರ, ಬಳ್ಳಾರಿ ನಗರದಲ್ಲಿ 2 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.