ADVERTISEMENT

ಕನ್ನಡ ಕಾರ್ಯಕರ್ತರ ಮೇಲೆ ಕೊಲೆ ಪ್ರಕರಣ: ಕರವೇ ಇಂದ ತೀವ್ರ ಪ್ರತಿಭಟನೆಯ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2021, 13:53 IST
Last Updated 16 ಡಿಸೆಂಬರ್ 2021, 13:53 IST
   

ಬೆಂಗಳೂರು: ಕೊಲೆಯತ್ನದಂಥ ಗಂಭೀರ ಪ್ರಕರಣ ದಾಖಲಿಸುವ ಮೂಲಕ ಸರ್ಕಾರ ಕನ್ನಡಿಗರ ಬೆನ್ನಿಗೆ ಚೂರಿ ಹಾಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಗುರುವಾರ ಟ್ವೀಟ್‌ ಮಾಡಿರುವ ಅವರು, ‘ಬೆಳಗಾವಿಯಲ್ಲಿ ಎಂಇಎಸ್ ಮುಖಂಡರಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕನ್ನಡ ಕಾರ್ಯಕರ್ತರ ಮೇಲೆ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವುದು ಅಕ್ಷಮ್ಯ. ಸರ್ಕಾರ ಕೂಡಲೇ ಮೊಕದ್ದಮೆ ಕೈಬಿಟ್ಟು ಎಲ್ಲ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಾದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಕೊಲೆಯತ್ನದಂಥಹ ಗಂಭೀರ ಪ್ರಕರಣ ದಾಖಲಿಸುವ ಮೂಲಕ ಸರ್ಕಾರ ಕನ್ನಡಿಗರ ಬೆನ್ನಿಗೆ ಚೂರಿ ಹಾಕಿದೆ. ಬಂಧಿತರ ಬಿಡುಗಡೆಗಾಗಿ ರಾಜ್ಯದಾದ್ಯಂತ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆ ಮೌನ ವಹಿಸಿದರೆ ಚಳವಳಿಯ ತೀವ್ರತೆ‌ ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ’ ಎಂದು ನಾರಾಯಣಗೌಡ ಟ್ವೀಟಿಸಿದ್ದಾರೆ.

ADVERTISEMENT

‘ಬಂಧಿತ ಕನ್ನಡ ಕಾರ್ಯಕರ್ತರ ಬಿಡುಗಡೆಗೆ ಸಂಬಂಧಿಸಿದಂತೆ ಕಾನೂ‌ನು ಸಹಾಯವನ್ನು ಕರ್ನಾಟಕ ರಕ್ಷಣಾ‌ ವೇದಿಕೆ ನೀಡಲಿದೆ. ಬೆಳಗಾವಿಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಬಂಧಿತ ಕಾರ್ಯಕರ್ತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ. ಕುಟುಂಬದವರು ಬಯಸಿದರೆ ಎಲ್ಲ ರೀತಿ ಸಹಾಯ ನೀಡಲಾಗುವುದು’ ಎಂದೂ ಭರವಸೆ ನೀಡಿದ್ದಾರೆ.

‘ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಗಳನ್ನು ಸುಡುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಇದಕ್ಕೆ ಸರಿಯಾದ ಸಂದರ್ಭದಲ್ಲಿ ಸರಿಯಾದ ಉತ್ತರವನ್ನು ನೀಡುತ್ತೇವೆ. ಬಾವುಟ ಸುಟ್ಟ ಹೇಡಿಗಳು ಸಮಾಜಘಾತಕರು. ಶಿವಸೇನೆ ಎಂಬುದೊಂದು ಭಯೋತ್ಪಾದಕ ಸಂಘಟನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.