ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಕರ್ನಾಟಕ ನಿವೃತ್ತ ನೌಕರರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಪ್ರಜಾವಾಣಿ ಚಿತ್ರ
ಬೆಂಗಳೂರು: ನಿವೃತ್ತಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ನಿವೃತ್ತ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
2022ರ ಜುಲೈ 1ರಿಂದ 2024ರ ಜುಲೈ 31ರ ಮಧ್ಯೆ ನಡುವೆ ನಿವೃತ್ತಿಯಾಗಿರುವ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನದ ಅನ್ವಯ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕು ಎಂದು ಕೋರಿದರು.
ಈ 25 ತಿಂಗಳ ಅವಧಿಯಲ್ಲಿ 17,963 ಮಂದಿ ನಿವೃತ್ತರಾಗಿದ್ದಾರೆ. ಆ ಪೈಕಿ ಶೇ 40 ಶಿಕ್ಷಕರು, ಶೇ 12ರಷ್ಟು ಆರೋಗ್ಯ ಇಲಾಖೆ ನೌಕರರು, ಶೇ 10 ಪೊಲೀಸ್ ಇಲಾಖೆ ಸಿಬ್ಬಂದಿ, ಉಳಿದಂತೆ ಶೇ 38ರಷ್ಟು ನೌಕರರು ವಿವಿಧ ಇಲಾಖೆಗಳಿಗೆ ಸೇರಿದ್ದಾರೆ. ಈ ಎಲ್ಲ ನೌಕರರು 7ನೇ ವೇತನ ಆಯೋಗದ ಪರಿಷ್ಕೃತ ವೇತನದ ಮೇಲೆ ಆರ್ಥಿಕ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಆಯೋಗದ ಆದೇಶವನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಿ ಆರ್ಥಿಕ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.
ವೇದಿಕೆ ರಾಜ್ಯ ಸಂಚಾಲಕ ಅಶೋಕ ಎಂ. ಸಜ್ಜನ, ರಾಜ್ಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಎಂ ಷಣ್ಮುಖಯ್ಯ, ಅಶೋಕ ಎಂ. ಸಜ್ಜನ, ಗುರು ತಿಗಡಿ, ಶಂಕರಪ್ಪ ಲಮಾಣಿ, ಎಸ್.ಜಿ.ಬೆಸೆರೊಟ್ಟಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.