ADVERTISEMENT

ರಿಯಲ್‌ ಎಸ್ಟೇಟ್‌ಗೆ ಕಡಿವಾಣ: ‘ತುಂಡು’ ಭೂಮಿ ಬಳಕೆಗೆ ನಿರ್ಬಂಧ

ತುಂಡು ಭೂಮಿಗಳಿಗೆ ಪಹಣಿ ಮತ್ತು ‘11ಇ’ ಅಡಿ ನಕ್ಷೆ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 3:59 IST
Last Updated 20 ಡಿಸೆಂಬರ್ 2021, 3:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ರಿಯಲ್‌ ಎಸ್ಟೇಟ್‌ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ಅತಿ ಚಿಕ್ಕದಾಗಿ ತುಂಡರಿಸಿ ಬಳಸುವುದನ್ನು ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದು, ಇಂತಹ ಭೂಮಿಗೆ ಪಹಣಿ ಮತ್ತು 11 ಇ ಅಡಿ ನಕ್ಷೆ ಮಾಡಿಕೊಡುವುದನ್ನು ನಿಷೇಧಿಸಿದೆ.

ಹೀಗಾಗಿ ಕೆಲವೇ ಗುಂಟೆ ಕೃಷಿ ಭೂಮಿಯಲ್ಲಿ ನಿವೇಶನಗಳನ್ನು ರೂಪಿಸುವುದು ಮತ್ತು ಕಟ್ಟಡಗಳನ್ನು ನಿರ್ಮಿಸಲು ಇನ್ನು ಮುಂದೆ ಸಾಧ್ಯವಿಲ್ಲ.

ಈ ಸಂಬಂಧ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂಮಾರಾಟ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. ಅದರ ಪ್ರಕಾರ ಇನ್ನು ಮುಂದೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ ಮತ್ತು ಇನ್ನುಳಿದ ಜಿಲ್ಲೆಗಳಲ್ಲಿ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೇ ನಂಬರ್‌ಗಳನ್ನು (ಹಿಸ್ಸಾ ನಂಬರ್‌ ಒಳಗೊಂಡಂತೆ) ಹೊಸದಾಗಿ ಸೃಜಿಸುವಂತಿಲ್ಲ.

ADVERTISEMENT

‘ರಾಜ್ಯದಲ್ಲಿ ಕೃಷಿ ಭೂಮಿಯನ್ನು ತುಂಡು ತುಂಡು ಮಾಡಿ ಮಾರಾಟ ಮಾಡುತ್ತಿದ್ದು, ಈ ರೀತಿ ಮಾರಾಟ ಮಾಡುತ್ತಿರುವ ಭೂಮಿಗಳನ್ನುಕೃಷಿ ಉದ್ದೇಶಗಳಿಗೆ ಬಳಸುತ್ತಿಲ್ಲ. ನಿವೇಶನ, ಕಟ್ಟಡ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ನಡೆಯುತ್ತಿದೆ. ಇದರಿಂದಾಗಿ ನಗರೀಕರಣ ಸುವ್ಯವಸ್ಥಿತವಾಗಿ ನಡೆಯುತ್ತಿಲ್ಲ ಹಾಗೂ ಅವಶ್ಯಕ ಮೂಲಸೌಕರ್ಯಗಳಾದ ರಸ್ತೆ, ಒಳಚರಂಡಿ, ನೀರು, ಇತ್ಯಾದಿಗಳನ್ನು ಪೂರೈಸಲು ಕಷ್ಟವಾಗುತ್ತಿದೆ’ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಕರ್ನಾಟಕ ನಗರಾಭಿವೃದ್ಧಿ ಕಾಯ್ದೆಯಡಿ ನಿಯಮ ಬದ್ಧವಾಗಿ ಅನುಮೋದನೆ ಪಡೆಯದೇ ಕೃಷಿ ಭೂಮಿಗಳನ್ನು ನಿವೇಶನ ಮತ್ತು ಕಟ್ಟಡಗಳಿಗಾಗಿ ಪರಿವರ್ತಿಸುತ್ತಿರುವ ಬಗ್ಗೆ ರಾಜ್ಯದಾದ್ಯಂತ ದೂರುಗಳು ಬಂದಿದ್ದವು.

ಇದೊಂದು ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಭೂಮಿಯನ್ನು ತುಂಡು– ತುಂಡು ಮಾಡುವುದನ್ನು ನಿರ್ಬಂಧಿಸಿ, ಪಹಣಿ ಮಾಡದೇ ಇರಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.

ಕೃಷಿ ಭೂಮಿ ತುಂಡು ಮಾಡಿ ಉದ್ದೇಶಪೂರ್ವಕವಾಗಿ ಮಾರಾಟ ಮಾಡುವುದು ‘ಕರ್ನಾಟಕ ಭೂಕಂದಾಯ ಅಧಿನಿಯಮ
1964’ರ ಕಲಂ 95ರ ಸ್ಪಷ್ಟ ಉಲ್ಲಂಘನೆ. ತುಂಡು ಭೂಮಿಗಳಲ್ಲಿ ಕೃಷಿ ನಡೆಸಲು ಆಗುವುದಿಲ್ಲ.

ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಕೆ ಆಗುತ್ತಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಹೊಸ ಆದೇಶದಲ್ಲಿ ಏನಿದೆ?

* ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ ಮತ್ತು ಇತರ ಜಿಲ್ಲೆಗಳಲ್ಲಿ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣಕ್ಕೆ 11ಇ ನಕ್ಷೆ ತಯಾರಿಸುವಂತಿಲ್ಲ ಮತ್ತು ವಿತರಿಸುವಂತಿಲ್ಲ.

* ಈಗಾಗಲೇ ಅಸ್ತಿತ್ವದಲ್ಲಿರುವ ಸರ್ವೆ ನಂಬರ್‌ ಅಥವಾ ಪಹಣಿಗಳು ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಅಂತಹ ಸರ್ವೆ ನಂಬರ್‌ ಅಥವಾ ಪಹಣಿಗಳು ಹಾಗೆಯೇ ಮುಂದುವರೆಯುತ್ತವೆ. ಅವುಗಳನ್ನು ಸಂಪೂರ್ಣವಾಗಿ ಮಾನ್ಯ ಮಾಡಲಾಗುತ್ತದೆ.

* ಪಿತ್ರಾರ್ಜಿತ ಅಥವಾ ಆನುವಂಶಿಕವಾಗಿ ಬಂದ ಹಕ್ಕುಗಳ ಮೇಲೆ ಉಲ್ಲೇಖಿಸಿದ ವಿಸ್ತೀರ್ಣಕ್ಕಿಂತ
ಕಡಿಮೆ ಇದ್ದರೂ ಅವುಗಳ ಹೊಸ ಪಹಣಿ ರಚಿಸಬಹುದು ಮತ್ತು ಪೋಡಿ ಮಾಡಬಹುದು.

* ಈಗಾಗಲೇ ಪಹಣಿಗಳಲ್ಲಿ ದಾಖಲಾದ ಮತ್ತು ಅಸ್ತಿತ್ವದಲ್ಲಿರುವ ಮಾಲೀಕರ ಹಕ್ಕುಗಳ ಪ್ರಕಾರ ಪೋಡಿಯನ್ನು ಮೇಲೆ ಉಲ್ಲೇಖಿಸಿದಕ್ಕಿಂತ ಕನಿಷ್ಠ ವಿಸ್ತೀರ್ಣ ಪ್ರಮಾಣದಲ್ಲಿದ್ದರೆ ಅದರಂತೆ ಹೊಸ ಪಹಣಿ ರಚಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.