ADVERTISEMENT

ಸಚಿವ ಅಶೋಕಗೆ ಕೋವಿಡ್‌: ಸಂಪರ್ಕಿತರಿಗಿಲ್ಲ ಪ್ರತ್ಯೇಕವಾಸ?

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 20:06 IST
Last Updated 7 ಜನವರಿ 2022, 20:06 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ಕಂದಾಯ ಸಚಿವ ಆರ್‌.ಅಶೋಕ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಆದರೆ, ಕಳೆದ ಎರಡು ದಿನಗಳಿಂದ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಸಚಿವರು ಪ್ರತ್ಯೇಕವಾಸಕ್ಕೆ ಒಳಗಾಗದೇ ಅಧಿಕಾರಿಗಳ ಜತೆ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

‘ನನಗೆ ಕೋವಿಡ್‌ ದೃಢವಾಗಿದ್ದು,ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಟ್ವಿಟರ್‌ ಮೂಲಕ ಅಶೋಕ ಅವರು ಶುಕ್ರವಾರ ಮಧ್ಯಾಹ್ನ 2.50 ಕ್ಕೆ ಮನವಿ ಮಾಡಿದ್ದಾರೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆ, ಅವರ ಸಂಪರ್ಕಕ್ಕೆ ಬಂದಿದ್ದ ಮುಖ್ಯಮಂತ್ರಿ, ಆರೋಗ್ಯ ಡಾ. ಕೆ. ಸುಧಾಕರ್‌ ಸೇರಿದಂತೆ ಹಲವು ಸಚಿವರು ಕೋವಿಡ್‌ ಪರೀಕ್ಷೆ ಮಾಡಿಸಿ, ಪ್ರತ್ಯೇಕವಾಸಕ್ಕೆ ಒಳಗಾಗಬೇಕಿತ್ತು. ಆದರೆ ಯಾರೂ ಪ್ರತ್ಯೇಕವಾಸಕ್ಕೆ ಮೊರೆ ಹೋದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸಚಿವ ಸುಧಾಕರ್‌ ಒಳಗೊಂಡಂತೆ ಕೆಲವು ಸಚಿವರು ಸಂಜೆಯವರೆಗೆ ವಿವಿಧ ಸಭೆಗಳನ್ನು ನಡೆಸಿದ್ದಾರೆ.

ಅಶೋಕ ಅವರಲ್ಲಿ ಕೋವಿಡ್‌ನ ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ADVERTISEMENT

ಎರಡು ದಿನಗಳ ಹಿಂದೆ ನಡೆದ ಕೋವಿಡ್‌ ಕುರಿತ ಸಭೆಯಲ್ಲಿ ಅಶೋಕ ಭಾಗವಹಿಸಿದ್ದರು. ಅಲ್ಲಿ ಬೊಮ್ಮಾಯಿ ಅಲ್ಲದೆ, ಆರೋಗ್ಯ ಸಚಿವ ಸುಧಾಕರ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದರ ಜೊತೆಗೆ, ಸಂಸದ ಜಿ.ಎಂ.ಸಿದ್ದೇಶ್ವರ ಅವರ ಸಂಸ್ಥೆಯ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಅಲ್ಲೂ ಹಲವು ಸಚಿವರು ಇದ್ದರು. ಗುರುವಾರ ಬೆಳಿಗ್ಗೆ ವಿಧಾನಪರಿಷತ್‌ನ ನೂತನ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಹಾಜರಾಗಿದ್ದರು.

ಒಂದು ಕಡೆ ಸರ್ಕಾರ ಸಭೆ ಸಮಾರಂಭಗಳಲ್ಲಿ 50 ಕ್ಕೂ ಹೆಚ್ಚು ಜನರ ಸೇರಬಾರದು ಎಂದು ಕೋವಿಡ್‌ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಸಚಿವರು ಮತ್ತು ಅವರ ಸಂಬಂಧಿಗಳು, ಅಧಿಕಾರಿಗಳು ಪಾಲನೆ ಮಾಡದೇ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.