ADVERTISEMENT

ರಾಜ್ಯ ಕಾಂಗ್ರೆಸ್‌ ಹಿರಿಯ ನಾಯಕರ ಸಭೆ ಆರಂಭ

ಚುನಾವಣಾ ಸೋಲಿನ ಆತ್ಮಾವಲೋಕನ; ಪಕ್ಷ ಸಂಘಟನೆಯ ಗುರಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 7:18 IST
Last Updated 30 ನವೆಂಬರ್ 2020, 7:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇವನಹಳ್ಳಿಯ ಸಾದಹಳ್ಳಿ ಗೇಟ್‌ಲ್ಲಿರುವ ಕ್ಲಾರ್ಕ್ಸ್ ಎಕ್ಸೋಟಿಕಾ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡರ ಸಭೆ ಆರಂಭಗೊಂಡಿದೆ. ಸಭೆಗೆ ಎಐಸಿಸಿ ಪ್ರತಿನಿಧಿಯಾಗಿ ಮಹಾರಾಷ್ಟ್ರದ ಸಚಿವೆ ಯಶೋಮತಿ ಠಾಕೂರ್ ಬಂದಿದ್ದಾರೆ. ಹಿಂದಿನ ಚುನಾವಣಾ ಸೋಲುಗಳ ಆತ್ಮಾವಲೋಕನದ ಜೊತೆ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟು ಪಕ್ಷ ಸಂಘಟನೆಗೆ ಬಲ ತುಂಬುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖಂಡರಾದ ಜಿ. ಪರಮೇಶ್ವರ, ಎಸ್‌.ಆರ್‌. ಪಾಟೀಲ, ಕೆ.ಬಿ. ಕೋಳಿವಾಡ, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಯು.ಟಿ. ಖಾದರ್, ಎಚ್.ಕೆ. ಪಾಟೀಲ, ರಮನಾಥ್ ರೈ, ಅಭಯಚಂದ್ರ ಜೈನ್, ಎಚ್. ಅಂಜನೇಯ, ವಿ.ಎಸ್. ಉಗ್ರಪ್ಪ, ಧೃವ ನಾರಾಯಣ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದಾರೆ.

ಸಭೆಯ ಬಳಿಕ, ಸಂಜೆ 5 ಗಂಟೆಗೆ ಡಿ.ಕೆ. ಶಿವಕುಮಾರ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.

ADVERTISEMENT

ಸಭೆಗೂ ಮೊದಲ ಮಾತನಾಡಿದ ಶಾಸಕ ರಾಮಲಿಂಗಾರೆಡ್ಡಿ. ‘ಪಕ್ಷದ ಹಿರಿಯ ನಾಯಕರ‌ ಸಭೆ ಕರೆಯದೇ ಬಹಳ‌ ದಿನಗಳಾಗಿತ್ತು. ಪಕ್ಷಕ್ಕೆ ಇತ್ತೀಚಿನ ದಿನಗಳಲ್ಲಿ ಸೋಲಾಗಿದೆ. ಈ ಎಲ್ಲ ರಾಜಕೀಯ ವಿದ್ಯಮಾನಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪಕ್ಷದ ಸಂಘಟನೆ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ. ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಅದಕ್ಕೆ ಈಗಿನಿಂದಲೇ ನಾವು ಸಂಘಟನೆಯತ್ತ ಗಮನಹರಿಸುತ್ತೇವೆ’ ಎಂದರು.

ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಾಬಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮಲ್ಲೂ‌ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಆದರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಸ್ಥಾನದಿಂದ ಕೆಳಗೆ ಇಳಿಸುವ ಪ್ರಯತ್ನ ನಡೆಯುತ್ತಿದೆ. ನಮಗಿಂತ ಬಿಜೆಪಿಯಲ್ಲಿ ಹೆಚ್ಚು ಭಿನ್ನಾಭಿಪ್ರಾಯಗಳಿವೆ. ಬಿಜೆಪಿ ಹೀಗೇ ಇರುವುದಿಲ್ಲ. ಬೇರೆ ಬೇರೆ ಕಾರಣಗಳಿಂದ ಬಿಜೆಪಿ ಹೀಗೆ ಇರುವುದಿಲ್ಲ. ಅದಕ್ಕೆ ನಾವು ಈಗಿನಿಂದಲೇ ಟಾರ್ಗೆಟ್ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.

‘2013ರಲ್ಲಿ ಬಿಜೆಪಿಗೆ ಯಾವ ಸ್ಥಿತಿ ಬಂದಿತ್ತು. ಅದೇ ಸ್ಥಿತಿ ಮುಂದಿನ ಚುನಾವಣೆ ವೇಳೆಗೆ ನಿರ್ಮಾಣ ಆಗಲಿದೆ. ಹಿಂದೆ ಯಡಿಯೂರಪ್ಪ ಒಂದು, ಶ್ರೀರಾಮುಲು ಮತ್ತೊಂದು ಪಕ್ಷ ಕಟ್ಟಿಕೊಂಡಿದ್ದರು. ಅದೇ ರೀತಿಯಲ್ಲಿ ಮುಂದೆ ಬಿಜೆಪಿಯಲ್ಲಿ ಆಗಲಿದೆ. ಬೇರೆ ಬೇರೆ ಕಾರಣಗಳಿಂದ ಬಿಜೆಪಿಯಲ್ಲಿ ಶಾಸಕರು ಇರಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.