ADVERTISEMENT

ಬಿಜೆಪಿ ವರಿಷ್ಠರ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತ ನಾಯಕರು

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಅಂತ್ಯ: ಬಹಿರಂಗ ಹೇಳಿಕೆ ನೀಡಲು ಹಿಂದೇಟು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:30 IST
Last Updated 29 ಡಿಸೆಂಬರ್ 2021, 19:30 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿದರು. ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಇದ್ದಾರೆ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿದರು. ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ, ಪಕ್ಷದ ಆಂತರಿಕ ವಿಚಾರ ಹಾಗೂ ಅಸಮಾಧಾನಗಳನ್ನು ಬಹಿರಂಗವಾಗಿ ಎಲ್ಲಿಯೂ ಮಾತನಾಡುವಂತಿಲ್ಲ ಎಂದು ವರಿಷ್ಠರು ಎಚ್ಚರಿಕೆ ನೀಡಿದ ಬೆನ್ನಲ್ಲೇ, ಬುಧವಾರ ಕೆಲ ಶಾಸಕರು ಹಾಗೂ ಸಚಿವರು ಮಾಧ್ಯಮಗಳ ಎದುರು ಮಾತನಾಡಲು ಹಿಂದೇಟು ಹಾಕಿದರು.

ಇಲ್ಲಿನ ಡೆನಿಸನ್ಸ್‌ ಹೋಟೆಲ್‌ನಲ್ಲಿ ಬುಧವಾರ ಮುಕ್ತಾಯವಾದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಯ ಬಳಿಕ ಹೊರಬಂದ ಬಹುತೇಕ ನಾಯಕರು, ಪಕ್ಷದ ಯಾವುದೇ ಆಂತರಿಕವಾಗಿ ನಡೆದ ಚರ್ಚೆಯ ವಿವರವನ್ನು ಬಿಟ್ಟು ಕೊಡಲಿಲ್ಲ.

ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು. ಆಗ ಸಭೆ ಮುಗಿಸಿ ಹೊರಬಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ‘ಕ್ಯಾ ಚಲ್ ರಹಾ ಹೈ.. ರೇಣುಕಾಚಾರಿ’ ಎಂದರು. ರೇಣುಕಾಚಾರ್ಯ ಮಾತನಾಡುವುದನ್ನು ಬಿಟ್ಟು, ಕೂಡಲೇ ಅವರ ಹಿಂದೆ ಹೋದರು. ಬಳಿಕ‌ ಮತ್ತೆ ಬಂದು ‌ಮಾಧ್ಯಮದವರ ಜೊತೆ ಮಾತನಾಡಿದರು.

ADVERTISEMENT

ಸಚಿವ ಮುರುಗೇಶ ನಿರಾಣಿ ಅವರನ್ನು ಮಾತನಾಡಲು ಮಾಧ್ಯಮದವರು ಕರೆದರೂ ನೋಡಿಯೋ ನೋಡದಂತೆ ಹೊರಟರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಕಾರ್ಯಕಾರಿಣಿ ಕುರಿತು ಮಾಧ್ಯಮಗಳಿಗೆ ಹೇಳಿಕೆ‌ ನೀಡದಂತೆ ರಾಜ್ಯ ಘಟಕದ ಅಧ್ಯಕ್ಷರು ಸೂಚಿಸಿದ್ದಾರೆ. ಪಕ್ಷದ ನಿಲುವಿಗೆ ಬದ್ಧನಿದ್ದೇನೆ’ ಎಂದಷ್ಟೇ ಹೇಳಿದರು.

ವಿಜಯನಗರದಲ್ಲಿ ಮುಂದಿನ ಕಾರ್ಯಕಾರಿಣಿ:‌ ‘ಮುಂದಿನ ಕಾರ್ಯಕಾರಿಣಿ 2022ರ ಮಾರ್ಚ್ 28 ಮತ್ತು 29ರಂದು ನೂತನ ಜಿಲ್ಲೆ ವಿಜಯನಗರದಲ್ಲಿ ನಡೆಯಲಿದೆ. ಸಚಿವ ಆನಂದ್ ಸಿಂಗ್ ಕಾರ್ಯಚರಣೆಯ ನೇತೃತ್ವ ವಹಿಸುವರು’ ಎಂದು ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಭೆ: ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್‌ ಅವರು ವಿವಿಧ ವಿಭಾಗಗಳ ಮುಖಂಡರ ಜೊತೆ ನಡೆಸಿದ ಸಮಾಲೋಚನೆಯಲ್ಲಿ ‘150 ಗುರಿ’ ತಲುಪಲು ಕಾರ್ಯ ಯೋಜನೆ ರೂಪಿಸಿಕೊಳ್ಳುವಂತೆ ಸೂಚಿಸಿದರು.

ಇದೇ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಮಹೇಶ ಟೆಂಗಿನಕಾಯಿ, ‘ಮುಂದಿನ ಕಾರ್ಯಕಾರಿಣಿ ತನಕ ಇಲ್ಲಿ ವರಿಷ್ಠರು ರೂಪಿಸಿರುವ ನೀಲನಕ್ಷೆಯಂತೆ ಎಲ್ಲರೂ ಕೆಲಸ ಮಾಡಬೇಕು. ಈ ಕುರಿತು ಕಟೀಲ್‌ ಅವರು ಪಕ್ಷದ ಸಂಘಟನಾ ಮತ್ತು ಸಹ ಸಂಘಟನಾ ಕಾರ್ಯದರ್ಶಿಗಳ ಜೊತೆ
ಚರ್ಚಿಸಿದ್ದಾರೆ. ಎಲ್ಲರಿಗೂ ಸ್ಪಷ್ಟ ಕಾರ್ಯಸೂಚಿ ನೀಡಲಾಗಿದೆ. ಸಂಘಟನೆಯ ದೃಷ್ಟಿಯಿಂದ ಪ್ರಮುಖ ಹಾಗೂ ಪೇಜ್‌ ಪ್ರಮುಖ ತಂಡಗಳನ್ನು ಬಲಿಷ್ಠಗೊಳಿಸಲು ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಪ್ರಮುಖರ ಸಭೆ ರದ್ದು

ಹುಬ್ಬಳ್ಳಿ: ಕಾರ್ಯಕಾರಿಣಿ ಸಭೆಯ ಭಾಗವಾಗಿ ಬುಧವಾರ ಮಧ್ಯಾಹ್ನ ನಡೆಯಬೇಕಿದ್ದ ಪ್ರಮುಖರ ಸಭೆ ರದ್ದುಪಡಿಸಲಾಯಿತು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಪಾಲ್ಗೊಳ್ಳದ ಕಾರಣ ಸಭೆ ರದ್ದುಪಡಿಸಲಾಗಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ‘ಪ್ರಮುಖರ ಸಭೆ ಮೊದಲು‌ ನಿಗದಿಯಾಗಿರಲಿಲ್ಲ. ಹೀಗಾಗಿ‌ ನಡೆಯಲಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಬಾರದ ಕಾರಣ ಸಭೆ ವಿಷಯವನ್ನು ಅಜೆಂಡಾದಲ್ಲಿ ಸೇರಿಸಿರಲಿಲ್ಲ’ ಎಂದರು.

ಮುಖ್ಯಮಂತ್ರಿ ಅವರ ಪ್ರವಾಸ ಕಾರ್ಯಕ್ರಮದಲ್ಲಿ ಪ್ರಮುಖರ ಸಭೆ ಇರುವುದಾಗಿ ಮಾಧ್ಯಮಗಳಿಗೆ ಮಾಹಿತಿ‌ ನೀಡಲಾಗಿತ್ತಲ್ಲವೇ ಎನ್ನುವ ಪ್ರಶ್ನೆಗೆ, ‘ಗೊಂದಲದಿಂದ ಹೀಗಾಗಿದೆ’ ಎಂದು ಸಮಜಾಯಿಷಿ ನೀಡಿದರು.

‘ಸಂಘಟನೆಗೆ ಒತ್ತು‌ ನೀಡಲು‌ ಸೂಚನೆ’

ಹುಬ್ಬಳ್ಳಿ: ‘ಪಕ್ಷ ಸಂಘಟನೆಗೆ ಒತ್ತು‌ ಕೊಡಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಶಪಥ‌ ಮಾಡಬೇಕು ಎಂದು ಪಕ್ಷದ ಎಲ್ಲಾ ನಾಯಕರಿಗೆ ಸೂಚಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಕಾರ್ಯಕಾರಿಣಿ ‌ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಗಿರುವ ಸಾಧನೆಗಳನ್ನು ‌ಜನರ ಮುಂದಿಟ್ಟು ಚುನಾವಣೆ ಎದುರಿಸಲಿದ್ದೇವೆ’ ಎಂದರು.

‘ಸಿದ್ದರಾಮಯ್ಯ ಸರ್ಕಾರವಿದ್ದಾಗ ರಾಜ್ಯದಲ್ಲಿ ಹಿಂದೂಗಳ ಹತ್ಯೆಯಾಗುತ್ತಿತ್ತು. ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರಗಳು ನಡೆದಿದ್ದವು. ಹೀಗಾಗಿ ಕಾಂಗ್ರೆಸ್ ಮೇಲೆ ದೇಶದ ಜನರಿಗೆ ವಿಶ್ವಾಸವಿಲ್ಲ. ಆ ಪಕ್ಷದಲ್ಲಿ ಒಳಜಗಳ ನಡೆಯುತ್ತಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ‌ಇದೆಲ್ಲವನ್ನೂ ಚುನಾವಣೆ ಸಂದರ್ಭದಲ್ಲಿ ಜನರಿಗೆ ಮುಟ್ಟಿಸಲಾಗುವುದು’ ಎಂದರು.

ಕೇಂದ್ರದ ಸಾಧನೆಗೆ ಅಭಿನಂದನಾ ನಿರ್ಣಯ

ದಿವ್ಯ ಕಾಶಿ, ಭವ್ಯ ಕಾಶಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಸಾಧನೆಗಳಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಕಾರ್ಯಕಾರಿಣಿಯಲ್ಲಿ ಕೈಗೊಳ್ಳಲಾಯಿತು.

‘ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಕೆಗಾಗಿ, ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಿ ಭಾರತವನ್ನು ವಿಶ್ವ ಗುರುವಾಗಿಸಿದ್ದಕ್ಕೆ, ಜಾಗತಿಕ ಮಟ್ಟದಲ್ಲಿ ಯುದ್ಧ ಸಾಮಗ್ರಿಗಳ ರಫ್ತು ವಹಿವಾಟು ಹಾಗೂ ಸ್ವಸಹಾಯ ಗುಂಪುಗಳಿಗೆ ₹1,625 ಕೋಟಿ ಬಿಡುಗಡೆಯ ಸಾಧನೆಗಳನ್ನು ಕೊಂಡಾಡಿ ಎಂದು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು’ ಎಂದು ಪಕ್ಷದ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.