ADVERTISEMENT

ವಿಜ್ಞಾನ, ಐಟಿ–ಬಿಟಿಗೆ ಹೆಚ್ಚಿನ ಅನುದಾನ ಬೇಡಿಕೆ

ನಾಲೆಡ್ಜ್‌ ಸಿಟಿ ಮತ್ತು ಸಂಶೋಧನಾ ನಿಧಿಗೆ ಡಿಸಿಎಂ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 16:59 IST
Last Updated 3 ಫೆಬ್ರುವರಿ 2020, 16:59 IST

ಬೆಂಗಳೂರು:ವಿಜ್ಞಾನ, ತಂತ್ರಜ್ಞಾನ ಮತ್ತು ಐಟಿ– ಬಿಟಿ ಕ್ಷೇತ್ರದ ಅಭಿವೃದ್ಧಿಗೆ ₹530 ಕೋಟಿ, ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ₹1,500 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ನಡೆದ ಬಜೆಟ್‌ ಪೂರ್ವ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬೇಡಿಕೆ ಸಲ್ಲಿಸಿದ್ದಾರೆ.

ಸೆಂಟರ್‌ ಫಾರ್‌ ಇಂಟರ್ನೆಟ್‌ ಆಫ್‌ ಎಥಿಕಲ್‌ ಥಿಂಗ್ಸ್‌, ಇನ್ನೋವೇಷನ್‌ ಸೆಂಟರ್‌, ಟ್ಯಾಲೆಂಟ್‌ ಆಕ್ಸಿಲೇಟರ್, ಆಗ್ರೋ ಇನ್ನೋವೇಶನ್ ಸೆಂಟರ್‌ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಇದಕ್ಕಾಗಿ ₹ 342 ಕೋಟಿ ಅನುದಾನ ಕೇಳಿದ್ದೇವೆ ಎಂದು ಅವರು ತಿಳಿಸಿದರು.

ADVERTISEMENT

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ನಾಲೆಡ್ಜ್‌ ಸಿಟಿ, ರಾಜ್ಯ ಸಂಶೋಧನಾ ನಿಧಿ, ವಿಜ್ಞಾನ ಪ್ರತಿಭೆಗಳನ್ನು ಗುರುತಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಇದಕ್ಕಾಗಿ ₹188.4 ಕೋಟಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ವೈದ್ಯ ಶಿಕ್ಷಣದಡಿ ಬರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಅಭಿವೃದ್ಧಿಗಾಗಿ ₹1,500 ಕೋಟಿಗೆ ಬೇಡಿಕೆ ಇಟ್ಟಿದ್ದೇವೆ. ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್‌ ಕೇಂದ್ರ ಸ್ಥಾ‍ಪಿಸುವ ಉದ್ದೇಶವಿದೆ. ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆ ಸೇರಿ ಹಲವು ಜಿಲ್ಲೆಗಳ ಪ್ರಮುಖ ಆಸ್ಪತ್ರೆಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಸೇವೆ ಒದಗಿಸುವ ಉದ್ದೇಶ ಇದೆ ಎಂದು ಅವರು ಹೇಳಿದರು.

ಶೈಕ್ಷಣಿಕ ಸಂಸ್ಥೆಗಳ ಸುಧಾರಣೆಗಾಗಿ ₹4,500 ಕೋಟಿ, ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸುವುದರ ಜತೆಗೆ ಹೊಸದಾಗಿ ಆರಂಭವಾಗಿರುವ ವಿಶ್ವವಿದ್ಯಾಲಯಗಳ ಸುಧಾರಣೆಗೆ ಒತ್ತು ನೀಡಲಾಗುವುದು. ಕಾಲೇಜು ಶಿಕ್ಷಣಕ್ಕೆ ₹1,463 ಕೋಟಿ, ತಾಂತ್ರಿಕ ಶಿಕ್ಷಣಕ್ಕೆ ₹369 ಕೋಟಿ, ಬೆಂಗಳೂರು ಕೇಂದ್ರ ವಿ.ವಿ ಮತ್ತು ಉತ್ತರ ವಿ.ವಿಗೆ ತಲಾ ₹500 ಕೋಟಿ, ಸಂಸ್ಕೃತ ವಿ.ವಿಗೆ ₹300 ಕೋಟಿ, ರಾಣಿಚೆನ್ನಮ್ಮ ವಿ.ವಿಗೆ ₹500 ಕೋಟಿ ಸೇರಿ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಒಟ್ಟು ₹3,800 ಕೋಟಿ, ಎಂಜಿನಿಯರಿಂಗ್‌ ಕಾಲೇಜುಗಳ ಸುಧಾರಣೆಗೆ ₹4,500 ಕೋಟಿ ಅನುದಾನ ಕೇಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.