ADVERTISEMENT

ಮಹದಾಯಿ ಯೋಜನೆ: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೊಸ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 14:02 IST
Last Updated 5 ಅಕ್ಟೋಬರ್ 2023, 14:02 IST
<div class="paragraphs"><p>ಮಹದಾಯಿ ಯೋಜನೆ ನಕ್ಷೆ</p></div>

ಮಹದಾಯಿ ಯೋಜನೆ ನಕ್ಷೆ

   

ನವದೆಹಲಿ: ಮಹದಾಯಿ ಯೋಜನೆಯ ಭಾಗವಾದ ಕಳಸಾ ನಾಲಾ ತಿರುವು ಯೋಜನೆಗೆ 26.98 ಹೆಕ್ಟೇರ್ ಅರಣ್ಯ ಬಳಕೆಗೆ ಅನುಮೋದನೆ ನೀಡುವಂತೆ ಕೋರಿ ಕರ್ನಾಟಕ ಸರ್ಕಾರವು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸಚಿವಾಲಯ ಎತ್ತಿರುವ ಆಕ್ಷೇಪಣೆಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ.

ರಾಜ್ಯ ಸರ್ಕಾರದ ಧೋರಣೆಗೆ ಪುನಃ ಆಕ್ಷೇಪ ವ್ಯಕ್ತಪಡಿಸಿರುವ ಸಚಿವಾಲಯದ ಉಪ ಮಹಾನಿರೀಕ್ಷಕ ಎಂ.ಕೆ. ಶಂಭು, ಹೊಸ ಪ್ರಸ್ತಾವನೆ ತೃಪ್ತಿಕರವಾಗಿಲ್ಲ ಹಾಗೂ ಅಪೂರ್ಣವಾಗಿದೆ. ಕೇಂದ್ರದ ಆಕ್ಷೇಪಣೆಗಳಿಗೆ ಉತ್ತರ ನೀಡಿದರೆ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಸೆಪ್ಟೆಂಬರ್ 29 ರಂದು ಪತ್ರ ಬರೆದು ಆದಷ್ಟು ಬೇಗ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.

ADVERTISEMENT

ಕಳಸಾ ನಾಲಾ ತಿರುವು ಯೋಜನೆಗೆ ಅರಣ್ಯ ಬಳಕೆಗೆ ಅನುಮೋದನೆ ನೀಡಲು ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ಜನವರಿ 20ರಂದು ನಿರಾಕರಿಸಿತ್ತು. ಹುಲಿ ಕಾರಿಡಾರ್ ಹಾಗೂ ಪರಿಹಾರಾತ್ಮಕ ಅರಣ್ಯ ಬೆಳೆಸುವ ಕುರಿತು ಹೆಚ್ಚಿನ ವಿವರಣೆ ನೀಡುವಂತೆ ತಾಕೀತು ಮಾಡಿತ್ತು. ಬಳಿಕ ರಾಜ್ಯ ಸರ್ಕಾರ ವಿವರಣೆ ನೀಡಿತ್ತು.

ಸೆಪ್ಟೆಂಬರ್ 7ರಂದು ಪತ್ರ ಬರೆದ ಉಪ ಮಹಾನಿರೀಕ್ಷಕರು, ರಾಜ್ಯ ಸರ್ಕಾರದ ಈಗಿನ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಹದಾಯಿ ಯೋಜನೆಗೆ ಕುರಿತು ನ್ಯಾಯಾಲಯದ ಅದೇಶಗಳು ಹಾಗೂ ಕಾನೂನು ಹೋರಾಟದ ಕುರಿತು ಗೋವಾ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅವರು ಜನವರಿಯಲ್ಲಿ ಪತ್ರ ಬರೆದಿದ್ದಾರೆ. ಯೋಜನೆಗೆ ಅನುಮೋದನೆ ನೀಡುವ ಮೊದಲು ಈ ಅಂಶಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಯೋಜನೆಯನ್ನು ಹುಲಿ ಕಾರಿಡಾರ್‌ನಲ್ಲಿ ಜಾರಿಗೊಳಿಸಲು ಕರ್ನಾಟಕ ಮುಂದಾಗಿದೆ ಎಂದೂ ದೂರಿದ್ದಾರೆ. ಹೀಗಾಗಿ, ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ವಿವರಣೆ ನೀಡಬೇಕು ಎಂದು ಸೂಚಿಸಿದ್ದರು.

ಯಾವುದೇ ಅರಣ್ಯ ಕಾನೂನು/ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸದೆಯೇ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದೂ ಅವರು ಹೇಳಿದ್ದರು. ಜತೆಗೆ, ಹೊಸ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದರು. ರಾಜ್ಯ ಸರ್ಕಾರವು ಸೆಪ್ಟೆಂಬರ್ 11ರಂದು ಹೊಸ ಪ್ರಸ್ತಾವನೆ ಸಲ್ಲಿಸಿದೆ.

ಕಳಸಾ ನಾಲಾ ತಿರುವು ಯೋಜನೆಗೆ 1.74 ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. ಮಹದಾಯಿ ಯೋಜನೆಯ ಪರಿಷ್ಕೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್ ತಿಂಗಳಲ್ಲಿ ಅನುಮೋದನೆ ಕೊಟ್ಟಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.