ADVERTISEMENT

ಚುನಾವಣಾ ತಯಾರಿ: 150 ‘ಕೈ’ ಅಭ್ಯರ್ಥಿಗಳ ಘೋಷಣೆ?

ಕ್ಷೇತ್ರವಾರು ಸಮೀಕ್ಷೆ ವರದಿ ನವೆಂಬರ್‌ ಕೊನೆಯಲ್ಲಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 19:54 IST
Last Updated 25 ಸೆಪ್ಟೆಂಬರ್ 2022, 19:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಆರು ತಿಂಗಳು ಇರುವಾಗಲೇ 150 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿ, ಅಖಾಡಕ್ಕಿಳಿಯಲು ಕಾಂಗ್ರೆಸ್‌ ಗಂಭೀರ ಚಿಂತನೆ ನಡೆಸಿದೆ. ಆ ಮೂಲಕ, ಕೊನೆ ಕ್ಷಣದಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಿಸುವುದರಿಂದ ಎದುರಾಗುವ ಅಪಸ್ವರ, ಭಿನ್ನಮತದ ಸುಳಿಯಿಂದ ಪಾರಾಗುವ ತಂತ್ರಗಾರಿಕೆಯ ಮೊರೆ ಹೋಗಲು ‘ಕೈ’ ನಾಯಕರು ಮುಂದಾಗಿದ್ದಾರೆ.

ಪಕ್ಷದ ವರಿಷ್ಠರ ಸೂಚನೆಯಂತೆ ಚುನಾವಣಾ ತಂತ್ರಜ್ಞ ಸುನೀಲ್‌ ಕುನುಗೋಳ್ ನೇತೃತ್ವದ ತಂಡ ಪ್ರತಿ ವಿಧಾನಸಭಾ ಕ್ಷೇತದಲ್ಲಿ ಅಭ್ಯರ್ಥಿಗಳ ಗೆಲ್ಲುವ ಸಾಧ್ಯತೆಯನ್ನು ಆಧರಿಸಿ ಸಮೀಕ್ಷೆ ನಡೆಸುತ್ತಿದೆ. ಈ ವರದಿ ನವೆಂಬರ್ ಕೊನೆಯಲ್ಲಿ ಎಐಸಿಸಿಗೆ ಸಲ್ಲಿಕೆ ಆಗಲಿದೆ. ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಕನಿಷ್ಠ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಡಿಸೆಂಬರ್‌ನಲ್ಲಿ ಹೆಸರು ಪ್ರಕಟಿಸಲು ಚರ್ಚೆ ನಡೆದಿದೆ ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.

‘ಪ್ರತಿ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ಸಮೀಪಿಸಿದಾಗ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪರಿಪಾಠ ಪಕ್ಷದಲ್ಲಿದೆ. ಇದು ಪಕ್ಷದೊಳಗೆ ಆಂತರಿಕ ಭಿನ್ನಮತ ಸೃಷ್ಟಿಗೆ ಕಾರಣವಾಗುವ ಜೊತೆಗೆ, ಅಭ್ಯರ್ಥಿಗಳು ಮತದಾರರ ಬಳಿ ತಲುಪಲು ಸಮಯಾವಕಾಶದ ಕೊರತೆಯೂ ಎದುರಾಗುತ್ತದೆ. ಇದು ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಈ ಗೊಂದಲಗಳಿಗೆ ಅವಕಾಶ ನೀಡದಂತೆ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಪ್ರಚಾರ ತಂತ್ರಗಳನ್ನು ರೂಪಿಸಬೇಕಾದ ಕುರಿತು ಚರ್ಚೆ ನಡೆದಿದೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

ಪಕ್ಷದ ಶಾಸಕರು ಇರುವ ಕ್ಷೇತ್ರಗಳು ಮತ್ತು ಕಳೆದ ಚುನಾವಣೆಯಲ್ಲಿ ಕನಿಷ್ಠ ಅಂತರದಲ್ಲಿ ಅಭ್ಯರ್ಥಿ ಸೋಲು ಕಂಡ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನು ಘೋಷಿಸಲು ಉದ್ದೇಶಿಸಲಾಗಿದೆ. ಅಭ್ಯರ್ಥಿಯ ಹೆಸರು ಘೋಷಿಸುವ ಜೊತೆಗೆ, ಅಂದಿನಿಂದಲೇ ಕ್ಷೇತ್ರದಾದ್ಯಂತ ಸುತ್ತಾಡಿ ಜನಮತ ಪಡೆಯಲು ಕೆಲಸ ಮಾಡುವಂತೆ ಸೂಚನೆ ನೀಡಲಾಗುವುದು. ಪ್ರತಿ ಮತದಾರನನ್ನು ತಲುಪಲು ಸಾಧ್ಯವಾಗುವಂತೆ ಪ್ರಚಾರ ಕಾರ್ಯತಂತ್ರ ರೂಪಿಸುವಂತೆ ಈ ಅಭ್ಯರ್ಥಿಗಳಿಗೆ ತಿಳಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

ಚುನಾವಣೆಗೆ ಕೆಲವು ತಿಂಗಳು ಇರುವಾಗಲೇ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕುರಿತಂತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ’ ಯಾತ್ರೆ ರಾಜ್ಯದಲ್ಲಿ 21 ದಿನ ಸಂಚರಿಸಲಿದೆ. ಮುಂಬರುವ ಚುನಾವಣೆಯ ದೃಷ್ಟಿಯಿಂದ ಈ ಯಾತ್ರೆ ಮಹತ್ವದ್ದು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಎಲ್ಲ ಪ್ರಮುಖ ನಾಯಕರು ರಾಹುಲ್‌ ಜೊತೆ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ಅಭ್ಯರ್ಥಿಗಳತ್ತ ಜನರ ಒಲವು ಪರೀಕ್ಷೆ

‘ಈಗಾಗಲೇ ಕ್ಷೇತ್ರವಾರು ಪಕ್ಷದ ಸ್ಥಿತಿಗತಿಯ ಮೊದಲ ಸಮೀಕ್ಷಾ ವರದಿ ನೀಡಿರುವ ಸುನೀಲ್‌ ತಂಡ, ಇದೀಗ 2ನೇ ಹಂತದಲ್ಲಿ ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕೇಂದ್ರೀಕರಿಸಿ ಸಮೀಕ್ಷೆ ನಡೆಸುತ್ತಿದೆ. ಪಕ್ಷದ ಶಾಸಕರಿರುವ ಕ್ಷೇತ್ರದಲ್ಲಿ ಜನರ ಒಲವು ಯಾವ ಕಡೆ ಇದೆ, ಶಾಸಕರ ವಿರುದ್ಧ ಇದೆಯೇ? ಕಳೆದ ಚುನಾವಣೆಯಲ್ಲಿ ಕನಿಷ್ಠ ಮತಗಳಿಂದ ಸೋತ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಅನುಕಂಪ ಇದೆಯೇ? ಟಿಕೆಟ್‌ಗಾಗಿ ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್‌ ನೀಡಿದರೆ ಅನುಕೂಲ, ಸಂಭವನೀಯ 3–4 ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರ ಸಕಾರಾತ್ಮಕ– ನಕಾರಾತ್ಮಕ ಅಂಶಗಳೇನು? ಅಭ್ಯರ್ಥಿಗಾಗಿ ಹುಡುಕಾಡಬೇಕಾದ ಕ್ಷೇತ್ರಗಳಲ್ಲಿ ಯಾವ ರೀತಿಯ ನಿಲುವು ತೆಗೆದುಕೊಳ್ಳಬೇಕು ಮುಂತಾದ ವಿಚಾರಗಳಲ್ಲಿ ಈ ತಂಡ ವರದಿ ನೀಡಲಿದೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಈ ವರದಿಯಲ್ಲಿರುವ ಅಂಶಗಳೂ ಮಾನದಂಡ ಆಗಲಿವೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.