ADVERTISEMENT

ಕಾರವಾರ–ಗೋವಾದ ಪೆರ್ನೆಂ ರೈಲು ಮತ್ತಷ್ಟು ವ್ಯವಸ್ಥಿತ; ಸಂಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 8:36 IST
Last Updated 4 ಸೆಪ್ಟೆಂಬರ್ 2018, 8:36 IST
   

ಕಾರವಾರ: ನಗರ ಸಮೀಪದ ಶಿರವಾಡ ರೈಲು ನಿಲ್ದಾಣದಿಂದ ಗೋವಾದಪೆರ್ನೆಂಗೆ ಮೇಲ್ದರ್ಜೆಗೇರಿಸಿದ ರೈಲು ಸಂಚಾರ ಆರಂಭಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ರೈಲಿನ ಸಂಚಾರಕ್ಕೆಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಮಂಗಳವಾರ ಚಾಲನೆ ನೀಡಿದರು. ಇದರಿಂದ ದಿನವೂ ಸುಮಾರು 1,000 ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಡೆಮು(ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್) ರೈಲು ಇದಾಗಿದ್ದು, ಈಮೊದಲು ಕೇವಲ ಮೂರು ಬೋಗಿಗಳಿದ‌್ದವು. ಸ್ಥಳೀಯರ ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ಸ್ಪಂದಿಸಿದ ಕೊಂಕಣ ರೈಲ್ವೆಯು ಈಗ ತಲಾ 84 ಆಸನಗಳ ಎಂಟು ಬೋಗಿಗಳನ್ನು ನೀಡಿದೆ.ಸಾಮಾನ್ಯ ಬೋಗಿಗಳಿಗಿಂತ ಆಸಗಳ ನಡುವೆ ಹೆಚ್ಚು ಅಂತರವಿದೆ. ಕಿಟಕಿಗಳಿಗೆ ಪಾರದರ್ಶಕ ಗಾಜುಗಳನ್ನು ಅಳವಡಿಸಲಾಗಿದ್ದು, ಹೆಚ್ಚು ಬೆಳಕು ಬರುವಂತಿದೆ. ಕುಳಿತುಕೊಂಡು ಹೋಗಲು ಜಾಗವಿಲ್ಲದೇ ನಿಂತುಕೊಂಡು ಪ್ರಯಾಣಿಸುವವರಿಗೂ ಅನುಕೂಲವಾಗುವಂತೆಹೆಚ್ಚು ಹ್ಯಾಂಡಲ್‌ಗಳನ್ನು ಅಳವಡಿಸಲಾಗಿದೆ.

1,600 ಅಶ್ವಶಕ್ತಿಯ ಎಂಜಿನ್‌ನಲ್ಲಿಅತ್ಯಂತ ಕಡಿಮೆ ಅವಧಿಯಲ್ಲಿ ವೇಗವರ್ಧನೆ ಮತ್ತು ವೇಗ ನಿಯಂತ್ರಣದ ತಂತ್ರಜ್ಞಾನವಿದೆ. ಎಲ್ಲ ಬೋಗಿಗಳಲ್ಲೂ ಜೈವಿಕ ಶೌಚಾಲಯಗಳಿವೆ ಎಂದು ಕೊಂಕಣ ರೈಲ್ವೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ.ವರ್ಮಾ ತಿಳಿಸಿದ್ದಾರೆ.

ADVERTISEMENT

ದಿನಕ್ಕೆ ಎರಡು ಬಾರಿ ಸಂಚಾರ:ಕಾರವಾರದಿಂದ ದಿನವೂ ಬೆಳಿಗ್ಗೆ 6ಕ್ಕೆ ಹೊರಡಲಿರುವ ರೈಲು, 110 ಕಿ.ಮೀ ದೂರದ ಪೆರ್ನೆಂಗೆ ಬೆಳಿಗ್ಗೆ 9.30ಕ್ಕೆ ತಲುಪಲಿದೆ. ಅಲ್ಲಿಂದ ಬೆಳಿಗ್ಗೆ 9.40ಕ್ಕೆ ಹೊರಟು ಮಧ್ಯಾಹ್ನ 12.30ಕ್ಕೆ ಕಾರವಾರಕ್ಕೆ ವಾಪಸಾಗಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಕಾರವಾರದಿಂದ ಹೊರಟು ಸಂಜೆ 4.30ಕ್ಕೆ ತಲುಪಲಿದೆ. ಪೆರ್ನೆಂನಿಂದ ಸಂಜೆ 5.30ಕ್ಕೆ ಹೊರಟು ರಾತ್ರಿ 8.30ಕ್ಕೆ ಕಾರವಾರ ತಲುಪಲಿದೆ.

ಎರಡೂ ನಗರಗಳ ನಡುವಿನ ಪ್ರಯಾಣಕ್ಕೆ ₹ 35 ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತರಬೇತಿ ಕೇಂದ್ರಕ್ಕೆ ಚಿಂತನೆ:ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುವ ಮೊದಲು ವೇದಿಕೆಯಲ್ಲಿ ಮಾತನಾಡಿದ ಸಚಿವ ಅನಂತಕುಮಾರ ಹೆಗಡೆ, ‘ರೈಲ್ವೆ ಇಲಾಖೆಯಲ್ಲಿರುವ ಹಲವಾರು ಹುದ್ದೆಗಳಿಗೆ ಸ್ಥಳೀಯ ಯುವಕರು ನೇಮಕವಾಗಬೇಕು. ಅಲ್ಲಿರುವ ನೌಕರಿಗೆ ಸಂಬಂಧಿಸಿದಂತೆ ಕೌಶಲಾಭಿವೃದ್ಧಿಗೆ ತರಬೇತಿ ನೀಡುವ ಕೇಂದ್ರವೊಂದನ್ನು ಕಾರವಾರದಲ್ಲಿ ಆರಂಭಿಸಬೇಕು ಎಂಬ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ಕೊಂಕಣ ರೈಲ್ವೆಯ ಮುಖ್ಯವ್ಯವಸ್ಥಾಪಕ ನಿರ್ದೇಶಕರ ಜತೆ ಚರ್ಚಿಸಿದ್ದೇನೆ’ ಎಂದು ತಿಳಿಸಿದರು.

‘ಇಲಾಖೆಯ ದೊಡ್ಡ ಹುದ್ದೆಗಳಿಗೆ ಸಂಬಂಧಿಸಿದಂತೆಇಲ್ಲಿ ತರಬೇತಿ ನೀಡಲು ತಾಂತ್ರಿಕವಾಗಿ ಸಾಧ್ಯವಾಗದಿರಬಹುದು. ಆದರೆ, ಮಧ್ಯಂತರ ತರಬೇತಿ ನೀಡಲು ಅವಕಾಶವಿದೆ’ ಎಂದರು.

‘ಗೋಕರ್ಣ ರೈಲು ನಿಲ್ದಾಣವನ್ನು ಪಾರಂಪರಿಕ ಎಂದು ಘೋಷಣೆ ಮಾಡಬೇಕೆಂಬ ಬೇಡಿಕೆಯಿದೆ. ತೀರಾ ಹಳೆಯದಾದ ನಿಲ್ದಾಣಗಳನ್ನು ಮಾತ್ರಈ ಪಟ್ಟಿಗೆ ಪರಿಗಣಿಸಬಹುದು. ಆದರೆ, ಇಲ್ಲಿ 10–15 ವರ್ಷಗಳ ಹಿಂದೆಯಷ್ಟೇ ನಿರ್ಮಾಣವಾಗಿದೆ’ ಎಂದ ಅವರು, ‘ಜಿಲ್ಲೆಯ ಕರಾವಳಿಯಲ್ಲಿರುವ ಪ್ರವಾಸಿ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ರೈಲ್ವೆ ಜಾಲದ ಮೂಲಕ ಜೋಡಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಕಾರವಾರದ ಶೇಜವಾಡ, ಗೋಕರ್ಣ, ಕೊಲ್ಲೂರು ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವಂತೆ ಮಾಡಲು ಯೋಜನೆ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ನೌಕರಿ ಸಲುವಾಗಿ ಕಾರವಾರದಿಂದ ಪ್ರತಿದಿನ ಅಂದಾಜು 1,000 ಯುವಕರು ಗೋವಾಕ್ಕೆ ಪ್ರಯಾಣಿಸುತ್ತಾರೆ. ಈ ರೈಲನ್ನು ಮೇಲ್ದರ್ಜಗೇರಿಸಿ ಎಂದು ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಹಲವಾರು ಬಾರಿ ಮನವಿ ಕೊಟ್ಟಿದ್ದೆವು. ಆದರೆ, ಪ್ರಯೋಜನವಾಗಿರಲಿಲ್ಲ. ಈಗಿನ ರೈಲ್ವೆ ಸಚಿವರು ಸ್ಪಂದಿಸಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ತಾಲ್ಲೂಕು ಪಂಚಾಯ್ತಿಅಧ್ಯಕ್ಷೆ ಪ್ರಮೀಳಾ ನಾಯ್ಕ, ಶಿರವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗಾ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.