ADVERTISEMENT

ಕೆಎಎಸ್‌ ಅಧಿಕಾರಿ ಸುಧಾ ಪ್ರಕರಣ: ದಾಖಲೆಗಳ ನೈಜತೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 20:08 IST
Last Updated 10 ನವೆಂಬರ್ 2020, 20:08 IST
ಡಾ.ಬಿ. ಸುಧಾ
ಡಾ.ಬಿ. ಸುಧಾ   

ಬೆಂಗಳೂರು: ಕೆಎಎಸ್‌ ಅಧಿಕಾರಿ ಡಾ.ಬಿ.ಸುಧಾ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ 200ಕ್ಕೂ ಹೆಚ್ಚು ಸ್ಥಿರಾಸ್ತಿ ದಾಖಲೆಗಳ ನೈಜತೆ ಪರಿಶೀಲನೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರಂಭಿಸಿದೆ. ಇದಕ್ಕಾಗಿ ಹಲವು ತಂಡಗಳನ್ನು ನಿಯೋಜಿಸಲಾಗಿದೆ.

ಸುಧಾ ಮತ್ತು ಅವರ ಬೇನಾಮಿಗಳು ಎಂದು ಶಂಕಿಸಲಾಗಿರುವ ವ್ಯಕ್ತಿಗಳ ಮನೆ ಮೇಲೆ ಶನಿವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶೋಧ ಕಾರ್ಯಾಚರಣೆಯಲ್ಲಿ 200ಕ್ಕೂ ಹೆಚ್ಚು ಸ್ಥಿರಾಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ಮೈಸೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿರುವ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ದಾಳಿ ವೇಳೆ ದೊರಕಿವೆ. ಕ್ರಯ ಪತ್ರಗಳು, ಜಿಪಿಎ ಕರಾರುಗಳು, ಮಾರಾಟ ಮತ್ತು ಖರೀದಿ ಒಪ್ಪಂದಗಳು ನೋಂದಣಿಯಾಗಿರುವ ಉಪ ನೋಂದಣಿ ಕಚೇರಿಗೆ ಖುದ್ದಾಗಿ ಭೇಟಿನೀಡುತ್ತಿರುವ ಎಸಿಬಿ ಅಧಿಕಾರಿಗಳು, ದಾಖಲೆಗಳಲ್ಲಿನ ಸಾಮ್ಯತೆ ಕುರಿತು ಪರಿಶೀಲಿಸುತ್ತಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸಿಬಿ ಬೆಂಗಳೂರು ನಗರ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌, ‘ಮೊದಲು ದಾಖಲೆಗಳ ನೈಜತೆ ಖಚಿತವಾಗಬೇಕು. ಆ ಬಳಿಕ ಸ್ಥಿರಾಸ್ತಿಗಳ ಮೌಲ್ಯವನ್ನು ಅಂದಾಜಿಸಲಾಗುವುದು. ಎರಡು ದಿನಗಳಲ್ಲಿ ಈ ಪ್ರಕ್ರಿಯೆ ಒಂದು ಹಂತಕ್ಕೆ ತಲುಪಲಿದೆ’ ಎಂದರು.

ಸುಧಾ ಮತ್ತು ಅವರ ಆಪ್ತರಾದ ರೇಣುಕಾ ಮನೆಯಲ್ಲಿ ಪತ್ತೆಯಾಗಿರುವ 50 ಬ್ಯಾಂಕ್‌ ಖಾತೆಗಳು ಹಾಗೂ 50 ಚೆಕ್‌ಗಳ ಬಗ್ಗೆಯೂ ಇದೇ ಮಾದರಿಯಲ್ಲಿ ತನಿಖಾ ತಂಡ ಪರಿಶೀಲನೆ ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.