ADVERTISEMENT

ದಂಡ ಹಾಕಿಲ್ಲಾ ಅಂತಾ ಖುಷಿಪಡಿ: ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಹೈಕೋರ್ಟ್‌ ಚಾಟಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 16:15 IST
Last Updated 9 ಸೆಪ್ಟೆಂಬರ್ 2025, 16:15 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: 'ಅವ್ಯವಹಾರಗಳ ಆರೋಪಕ್ಕೆ ಸಂಬಂಧಿಸಿ ವಿಚಾರಣಾಧಿಕಾರಿ ನೇಮಕ ಮಾಡಿರುವುದನ್ನು ಪ್ರಶ್ನಿಸಲಾದ  ರಿಟ್‌ ಅರ್ಜಿಯನ್ನು ಇತ್ಯರ್ಥಪಡಿಸುವಂತೆ ಏಕಸದಸ್ಯ ನ್ಯಾಯಪೀಠಕ್ಕೆ ನಿರ್ದೇಶಿಸಬೇಕು’ ಎಂಬ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಅಧ್ಯಕ್ಷರ ಮನವಿಗೆ ಗರಂ ಆದ ಹೈಕೋರ್ಟ್‌, ‘ಮೇಲ್ಮನವಿಗೆ ದಂಡ ಹಾಕಿಲ್ಲವಲ್ಲಾ ಅಂತಾ ಖುಷಿಪಡಿ’ ಎಂದು ನೀರಿಳಿಸಿತು.

‘ಕನ್ನಡ ಸಾಹಿತ್ಯ ಪರಿಷತ್ತಿನ ಅನುದಾನ ಮತ್ತು ಖರ್ಚು-ವೆಚ್ಚಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರುಗಳನ್ನು ಆಧರಿಸಿ ಈ ಕುರಿತು ವಿಚಾರಣೆ ನಡೆಸಲು ಬೆಂಗಳೂರು ನಗರ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿದ್ದರು. ಇದನ್ನು ರದ್ದುಪಡಿಸಬೇಕು’ ಎಂದು ಕೋರಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ‘ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮದಡಿ ವಿಚಾರಣಾ ಅಧಿಕಾರಿಯನ್ನು ನೇಮಕ ಮಾಡಲಾಗಿರುವ ಸ್ವಪ್ರೇರಣಾ ಕ್ರಮ ಸರಿಯಾಗಿದೆ’ ಎಂಬ ಅಭಿಪ್ರಾಯದೊಂದಿಗೆ ವಿಚಾರಣಾ ಅಧಿಕಾರಿ ನೇಮಕ ಮಾಡಿದ್ದ ಆದೇಶ ರದ್ದುಪಡಿಸಲು ನಿರಾಕರಿಸಿದ್ದರು.‌

ADVERTISEMENT

ಏಕಸದಸ್ಯ ನ್ಯಾಯಪೀಠದ ಈ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮಹೇಶ್‌ ಜೋಶಿ ರಿಟ್‌ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಕಸಾಪ ಅಧ್ಯಕ್ಷರಿಗೆ ಬೇಕೆಂದೇ ತೊಂದರೆ ಕೊಡಬೇಕೆಂದೇ ವಿಚಾರಣಾ ಅಧಿಕಾರಿ ನೇಮಕ ಮಾಡಲಾಗಿದೆ’ ಎಂಬ ಮೇಲ್ಮನವಿದಾರರ ಆರೋಪವನ್ನು ಅಲ್ಲಗಳೆದರು. ‘ವಿಚಾರಣಾ ಅಧಿಕಾರಿ ನೇಮಕ ಕಾನೂನುಬದ್ಧವಾಗಿಯೇ ಇದೆ’ ಎಂದು ಪ್ರತಿಪಾದಿಸಿದರು. 

ಈ ವಾದಾಂಶವನ್ನು ಮಾನ್ಯ ಮಾಡಿದ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು. ಈ ವೇಳೆ ಮಹೇಶ್ ಜೋಶಿ ಪರ ವಕೀಲರು, ‘ಏಕಸದಸ್ಯ ನ್ಯಾಯಪೀಠದಲ್ಲಿರುವ ರಿಟ್‌ ಅರ್ಜಿಯನ್ನು ಆದಷ್ಟು ಶೀಘ್ರ ವಿಚಾರಣೆ ನಡೆಸಿ ವಿಲೇವಾರಿ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಗರಂ ಆದ ನ್ಯಾಯಪೀಠ, ‘ಇದೊಂದು ಸಹಕಾರ ಸಂಘಗಳ ಅಡಿಯಲ್ಲಿನ ವ್ಯಾಜ್ಯ. ನಿಮ್ಮ ಅಧ್ಯಕ್ಷರ ವಿರುದ್ಧ ದೂರುಗಳು ಬಂದಾಗ ಅವರು ಯಾಕೆ ದೂರುದಾರರಿಗೆ ಅಥವಾ ಸದಸ್ಯರಿಗೆ ದಾಖಲೆ ಪ್ರಸ್ತುತಪಡಿಸಿಲ್ಲ? ವಾರ್ಷಿಕ ಮಹಾಸಭೆಯಲ್ಲೇ ಎಲ್ಲವನ್ನೂ ವಿಶದಪಡಿಸುತ್ತೀನಿ ಎಂದು ಅವರು ಹೇಳಿದ್ದೇಕೆ’ ಎಂದು ಖಾರವಾಗಿ ಪ್ರಶ್ನಿಸಿತು. ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರೂ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.