ADVERTISEMENT

ಭಾರತ ಬಿಟ್ಟು ಓಡೊ ಯಾತ್ರೆ: ಕಟೀಲ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 20:50 IST
Last Updated 5 ಅಕ್ಟೋಬರ್ 2022, 20:50 IST
ನಳಿನ್ ಕುಮಾರ್‌ ಕಟೀಲ್‌
ನಳಿನ್ ಕುಮಾರ್‌ ಕಟೀಲ್‌   

ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವುದು ಭಾರತ್‌ ಜೋಡೊ ಅಲ್ಲ, ‘ಭಾರತ ಬಿಟ್ಟು ಓಡೊ ಯಾತ್ರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ; ಅದು ಚೇತರಿಕೆ ಕಾಣಲಾರದು ಎಂದು ಮನಗಂಡ ಹಲವು ನಾಯಕರು ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಅವರನ್ನು ಜೋಡಿಸಬೇಕಿದ್ದ ರಾಹುಲ್‌, ಅವರ ತಾತ ವಿಭಜಿಸಿದ್ದ ದೇಶ ಜೋಡಿಸಲು ಹೊರಟಿದ್ದಾರೆ. ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿದಪ್ರಧಾನಿ ನರೇಂದ್ರ ಮೋದಿ ನಿಜವಾಗಲೂ ದೇಶ ಜೋಡಿಸುವ ಕಾರ್ಯ ಮಾಡಿದ್ದಾರೆ.ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಆಂತರಿಕ ಭಿನ್ನಮತ ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ. ಶಾಶ್ವತವಾಗಿ ಮೂಲೆಗುಂಪಾಗಲಿದೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೊ ಕರ್ನಾಟಕಕ್ಕೆ ಪ್ರವೇಶ ಮಾಡುವಾಗ ಕಾಂಗ್ರೆಸ್ ಮುಖಂಡರು ಎರಡು ತಂಡಗಳಾಗಿ ಸ್ವಾಗತ ಮಾಡಿದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಹಗಲುಕನಸು ಕಾಣುವ ಸಿದ್ದರಾಮಯ್ಯ, ಜೈಲಿನತ್ತ ಮುಖ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರತ್ಯೇಕವಾಗಿ ಸ್ವಾಗತಿಸಿದ್ದಾರೆ.2023ರ ಚುನಾವಣೆಯಲ್ಲಿ ಗೆದ್ದು ಕರ್ನಾಟಕವನ್ನು ‘ಕಾಂಗ್ರೆಸ್ ಪಾರ್ಟಿ ಎಟಿಎಂ’ ಮಾಡಿಕೊಳ್ಳಲು ಕಾಂಗ್ರೆಸ್‍ನ ನಕಲಿ ಗಾಂಧಿ ಕುಟುಂಬ ಯೋಚಿಸಿದೆ. ಅದು ಈಡೇರುವ ಸಾಧ್ಯತೆ ಇಲ್ಲ ಎಂದು ಕುಟುಕಿದ್ದಾರೆ.

ADVERTISEMENT

ಪಿಎಫ್‍ಐ, ಎಸ್‍ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿದ್ದ ಸಿದ್ದರಾಮಯ್ಯ, ರಾಜ್ಯಕ್ಕೆ ‘ಪಿಎಫ್‍ಐ ಭಯೋತ್ಪಾದನಾ ಭಾಗ್ಯ’ ನೀಡಿದ್ದರು. ಈಗ ಆ ಸಂಘಟನೆಗಳ ನಿಷೇಧ ನುಂಗಲಾರದ ಬಿಸಿತುಪ್ಪದಂತಾಗಿದೆ. ಓಲೈಕೆ, ತುಷ್ಟೀಕರಣ, ಹಿಂದೂ ವಿರೋಧಿ ರಾಜಕಾರಣ ಮುಂದಿನ ಚುನಾವಣೆಯಲ್ಲಿ ಫಲ ಕೊಡುವುದಿಲ್ಲ ಎಂದು ಛೇಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.