ADVERTISEMENT

ಕೆ.ಸಿ.ವ್ಯಾಲಿ ಕೈಬಿಟ್ಟರೆ ವೆಚ್ಚ ಭರಿಸುವವರು ಯಾರು: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2018, 19:30 IST
Last Updated 16 ಆಗಸ್ಟ್ 2018, 19:30 IST
   

ಬೆಂಗಳೂರು: ‘ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 126 ಕೆರೆಗಳಿಗೆ ನೀರು ತುಂಬಿಸುವ ಕೆ.ಸಿ (ಕೋಲಾರ ಚಲ್ಲಘಟ್ಟ) ವ್ಯಾಲಿ ಯೋಜನೆಯನ್ನು ಒಂದು ವೇಳೆ ಕೈಬಿಡುವ ಆಲೋಚನೆ ಮಾಡಿದ್ದೇ ಆದಲ್ಲಿ ಅದರ ವೆಚ್ಚವನ್ನು ಯಾರ ಹೆಗಲಿಗೆ ವರ್ಗಾಯಿಸಬೇಕು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಈ ಕುರಿತಂತೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಪಟ್ರೇನಹಳ್ಳಿಯ ಆರ್.ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬೆಂಗಳೂರು ಜಲಮಂಡಳಿ ಪರ ವಕೀಲ ಗುರುದೇವ ಗಚ್ಚಿನಮಠ ಅವರು, ‘ನೀರಿನ ಗುಣಮಟ್ಟದ ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇದು ಸಾರ್ವಜನಿಕಕರಿಗೆ ಸಂಬಂಧಿಸಿದ ಗಂಭೀರವಾದ ವಿಚಾರ‌. ನಿರ್ಲಕ್ಷ್ಯ ಸಲ್ಲದು. ಇದರ ಹೊಣೆಯಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. ಒಂದು ವೇಳೆ ಯೋಜನೆಯನ್ನು ಕೈಬಿಡುವುದಾದರೆ ಇದಕ್ಕಾಗಿ ಖರ್ಚು ಮಾಡಿರುವ 1300 ಕೋಟಿ ವೆಚ್ಚವನ್ನು ಯಾರು ಭರಿಸಬೇಕು’ ಎಂದು ಪ್ರಶ್ನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.