ಬೆಂಗಳೂರು: ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿರುವ ‘ಕೆಇಎ ಬಾಟ್’ ಕೇವಲ ನೂರು ದಿನಗಳಲ್ಲಿ ವಿದ್ಯಾರ್ಥಿಗಳು, ಪೋಷಕರಿಂದ 5.15 ಲಕ್ಷ ಪ್ರಶ್ನೆಗಳನ್ನು ಎದುರಿಸಿದ್ದು, ಅಷ್ಟಕ್ಕೂ ಉತ್ತರಿಸಲಾಗಿದೆ’ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ವಿವಿಧ ನೇಮಕಾತಿ, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಲಿಖಿತ ಪರೀಕ್ಷೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಸುವ ಕೆಇಎ, ಅಭ್ಯರ್ಥಿಗಳು ಮತ್ತು ಪೋಷಕರಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುತ್ತಿದೆ. ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳು, ಪೋಷಕರ ಪ್ರಶ್ನೆಗಳಿಗೆ ಯಾರ ಮಧ್ಯಸ್ಥಿಕೆ ಇಲ್ಲದೆ ಉತ್ತರ ಪಡೆಯುವ ಈ ವ್ಯವಸ್ಥೆಯನ್ನು ಮಾರ್ಚ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು.
‘ಆರಂಭದಲ್ಲಿ ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಿದ್ದ ಬಾಟ್, ಈಗ ಕನ್ನಡದಲ್ಲಿ ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಿದೆ. ನಿತ್ಯವೂ ಅದಕ್ಕೆ ಮಾಹಿತಿ ನೀಡುವ ಕೆಲಸವನ್ನು ಕೆಇಎ ತಂಡ ಮಾಡುತ್ತಿದ್ದು, ಯಾರು ಏನೇ ಕೇಳಿದರೂ ಉತ್ತರಿಸುವ ಕೆಲಸ ಮಾಡುತ್ತಿದೆ. ಸಂಬಂಧ ಇಲ್ಲದ ಪ್ರಶ್ನೆ ಕೇಳಿದರೆ ‘ತನ್ನ ವ್ಯಾಪ್ತಿಯಲ್ಲಿ ಇಲ್ಲ’ ಎಂದೂ ಪ್ರತ್ಯುತ್ತರ ನೀಡುತ್ತದೆ’ ಎಂದು ಪ್ರಸನ್ನ ತಿಳಿಸಿದರು.
‘ಮೊದಲ ದಿನ ಕೇವಲ 102 ಆಸಕ್ತರು ಕೆಇಎ ಚಾಟ್ ಬಾಟ್‌ಗೆ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದರು. ಜೂನ್ 11ರಂದು ಈವರೆಗಿನ ಅತಿ ಹೆಚ್ಚು ಅಂದರೆ 35,369 ಮಂದಿ ಪ್ರಶ್ನೆ ಕೇಳಿ ಮಾಹಿತಿ ಪಡೆದಿದ್ದಾರೆ. ಜೂನ್ 12ರಂದು 34,414, ಜೂನ್ 13ರಂದು 23,122, ಜೂನ್ 14ರಂದು 28,082 ಮಂದಿ, ಜೂನ್ 15ರಂದು 18,294 ಮತ್ತು ಜೂನ್ 16ರಂದು 16,287 ಮಂದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ’ ಎಂದು ಅವರು ವಿವರಿಸಿದರು.
‘ಕೇಳಿರುವ ಪ್ರಶ್ನೆಗಳ ಪೈಕಿ ಕಳೆದ ವರ್ಷದ ಕಟ್ ಆಫ್ ರ‍್ಯಾಂಕ್ ಕುರಿತ ಪ್ರಶ್ನೆಗಳೇ ಅಧಿಕ. ಇದುವರೆಗೂ 2.7 ಲಕ್ಷ ಮಂದಿ ಕಟ್ ಆಫ್ ರ‍್ಯಾಂಕ್ ಕುರಿತು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಅಲ್ಲದೆ, ಪ್ರವೇಶಾತಿ, ಅರ್ಹತೆ, ಪರೀಕ್ಷಾ ವೇಳಾಪಟ್ಟಿ, ಮುಖ್ಯವಾದ ದಿನಾಂಕಗಳು, ಪ್ರವೇಶಪತ್ರ ಇತ್ಯಾದಿಗಳ ಡೌನ್ ಲೋಡ್, ಹೊಸ ಪ್ರಕಟಣೆಗಳು, ನೇಮಕಾತಿ ಮುಂತಾದವುಗಳನ್ನು ತಿಳಿದುಕೊಳ್ಳಲು ಚಾಟ್-ಬಾಟ್ ಬಳಸುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಸರಿಯಾಗಿ ಉತ್ತರ ನೀಡದಿದ್ದಾಗ ಅದನ್ನು ಗಮನಿಸಿ, ಸರಿ ಮಾಡುವ ಕೆಲಸವೂ ಆಗುತ್ತಿದೆ’ ಎಂದಿದ್ದಾರೆ.
‘ಸದ್ಯ ಸಿಇಟಿ, ನೀಟ್ ರ‍್ಯಾಂಕ್ ಪ್ರಕಟ ವಾಗಿದ್ದು, ಅದನ್ನು ಆಧಾರವಾಗಿ →ಇಟ್ಟುಕೊಂಡು ಕಳೆದ ವರ್ಷ ಯಾವ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು ಎನ್ನುವುದನ್ನೂ ಬಾಟ್ ಮೂಲಕ ಸುಲಭವಾಗಿ ಪಡೆಯಬಹುದು. ವಿದ್ಯಾರ್ಥಿಗಳು ತಮಗೆ ಯಾವ ಕಾಲೇಜಿನಲ್ಲಿ ಸೀಟು ಸಿಗಬಹುದು ಎಂಬುದರ ಅಂದಾಜು ಇದರಿಂದ ಮಾಡಬಹುದು’ ಎಂದು ಪ್ರಸನ್ನ ಹೇಳಿದ್ದಾರೆ.
ಇತರರ ಮಾತು ಕೇಳಿ ಮೋಸ ಹೋಗುವುದರ ಬದಲು ಕೆಇಎ ಅಧಿಕೃತ ಸಾಮಾಜಿಕ ಜಾಲ ತಾಣಗಳನ್ನು ಫಾಲೊ ಮಾಡಿ ತಾಜಾ ಮಾಹಿತಿ ಪಡೆಯಬಹುದು
-ಎಚ್. ಪ್ರಸನ್ನ , ಕಾರ್ಯನಿರ್ವಾಹಕ ನಿರ್ದೇಶಕ ಕೆಇಎ
‘ಕೆಇಎ ವಿಕಸನ’
ಯೂಟ್ಯೂಬ್ ಚಾನಲ್ ‘ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ಚಾಟ್-ಬಾಟ್ ಜೊತೆಗೆ ಕೆಇಎ ವಿಕಸನ’ ಎಂಬ ಯೂಟ್ಯೂಬ್ ಚಾನಲ್ ಕೂಡ ಆರಂಭಿಸಲಾಗಿದೆ. ಇದರಲ್ಲಿ ಅಪ್ ಲೋಡ್ ಮಾಡುವ ವಿಡಿಯೊಗಳನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸುತ್ತಿದ್ದಾರೆ. 48 ಸಾವಿರ ಮಂದಿ ಚಂದಾದಾರರಾಗಿದ್ದಾರೆ’ ಎಂದು ಪ್ರಸನ್ನ ತಿಳಿಸಿದ್ದಾರೆ. ಕೆಇಎ ಎಕ್ಸ್ (ಟ್ವಿಟರ್): ‘ಕೆಇಎ ಎಕ್ಸ್ (@KEA_karnataka) ಸಾಮಾಜಿಕ ಜಾಲತಾಣ ಕೂಡಾ ಜನಪ್ರಿಯವಾಗಿದ್ದು 35700 ಮಂದಿ ಚಂದಾದಾರರಾಗಿದ್ದಾರೆ’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.