ADVERTISEMENT

ಕಾಲೇಜು ಶುಲ್ಕ ವರ್ಗಾವಣೆಗೆ ಹೊಸ ಪೋರ್ಟಲ್‌

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 16:16 IST
Last Updated 5 ಆಗಸ್ಟ್ 2025, 16:16 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ಸೀಟು ಹಂಚಿಕೆ ವೇಳೆ ಸಂಗ್ರಹಿಸಿದ ಶುಲ್ಕವನ್ನು ವಿದ್ಯಾರ್ಥಿಗಳು ಪ್ರವೇಶ ಪಡೆದ ಕಾಲೇಜುಗಳಿಗೆ ಒಂದೇ ಕಂತಿನಲ್ಲಿ (ಶೇ 100) ಪಾವತಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂದಾಗಿದೆ.

ಸೀಟು ಹಂಚಿಕೆ ವೇಳೆ ವಿದ್ಯಾರ್ಥಿಗಳು ಯಾವ ಕಾಲೇಜು ಹಾಗೂ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಆ ಕಾಲೇಜು ಹಾಗೂ ಕೋರ್ಸ್‌ಗಳಿಗೆ ನಿಗದಿ ಮಾಡಿರುವ ಮೊತ್ತವನ್ನು ಕೆಇಎ ಖಾತೆಗೆ ಜಮಾ ಮಾಡುತ್ತಾರೆ. ನಂತರವೇ ಸೀಟು ಖಚಿತತೆಯ ಪತ್ರ ಡೌನ್‌ಲೋಡ್‌ ಮಾಡಿಕೊಂಡು ಆಯಾ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಾರೆ. ಪ್ರವೇಶ ಖಚಿತಪಡಿಸಿಕೊಂಡ ನಂತರ ಶೇ 80ರಷ್ಟು ಹಣವನ್ನು ಆಯಾ ಕಾಲೇಜುಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ನಂತರ ಆಯಾ ವಿಶ್ವವಿದ್ಯಾಲಯಗಳು ಪ್ರವೇಶ ಖಾತ್ರಿಪಡಿಸಿದ ನಂತರ ಉಳಿದ ಶೇ 20ರಷ್ಟು ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿತ್ತು.

ADVERTISEMENT

ಕಾಲೇಜುಗಳಿಗೆ ಶುಲ್ಕ ಪಾವತಿಯ ವಿಳಂಬ ತಪ್ಪಿಸಲು ಕೆಇಎ ಹೊಸ ಕಾಲೇಜು ಪೋರ್ಟಲ್‌ ಸಿದ್ಧಪಡಿಸಿದೆ. ಮೊದಲ ಸುತ್ತು ಸೇರಿದಂತೆ ವಿವಿಧ ಸುತ್ತುಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿದ್ದಂತೆ ಪೋರ್ಟಲ್‌ ಮೂಲಕ ಮಾಹಿತಿ ಸಿಗಲಿದೆ. ತಕ್ಷಣ ಶುಲ್ಕ ವರ್ಗಾವಣೆ ಮಾಡಲಾಗುತ್ತದೆ.

‘ಪರೀಕ್ಷೆ ಬರೆಯುವಾಗ ಪ್ರವೇಶ ಪತ್ರದ ಜತೆಗಿನ ಪೋಟೊ ಜತೆಗೂ ತುಲನೆ ಮಾಡಿ ಅದೇ ವಿದ್ಯಾರ್ಥಿ ಎನ್ನುವುದನ್ನೂ ಪೋರ್ಟಲ್‌ ಖಚಿತಪಡಿಸಲಿದೆ. ಇದರಿಂದ ನಕಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದನ್ನು ತಪ್ಪಿಸಬಹುದು, ಸೀಟ್‌ ಬ್ಲಾಕಿಂಗ್‌ ದಂಧೆಯನ್ನೂ ತಡೆಯಬಹುದು. ಶೇ 100ರಷ್ಟು ಶುಲ್ಕವನ್ನು ತಕ್ಷಣವೇ ಕಾಲೇಜುಗಳ ಖಾತೆಗೆ ಜಮೆ ಮಾಡಬಹುದು. ಪ್ರವೇಶಕ್ಕೆ ನಿಗದಿಪಡಿಸಿದ ಕೊನೆ ದಿನಾಂಕದ ಒಳಗೆ ಯಾರೆಲ್ಲ ಕಾಲೇಜುಗಳಿಗೆ ವರದಿ ಮಾಡಿಕೊಳ್ಳುವುದಿಲ್ಲವೊ ಅವರನ್ನು ಪ್ರಕ್ರಿಯೆಯಿಂದ ಹೊರ ಹಾಕಲಾಗುತ್ತದೆ. ಅವರ ಸೀಟುಗಳನ್ನು ಮುಂದಿನ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು’ ಎನ್ನುತ್ತಾರೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ. 

ಇದುವರೆಗೂ ಸರ್ಕಾರಿ ಕಾಲೇಜು ಹೊರತುಪಡಿಸಿ, ಖಾಸಗಿ ಕಾಲೇಜುಗಳಿಗೆ ಸೀಟು ಹಂಚಿಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮತ್ತು ಸಂಗ್ರಹ ಕೆಇಎ ಕಚೇರಿಯಲ್ಲೇ ನಡೆಯುತ್ತಿತ್ತು. ಆದರೆ, ಈ ವರ್ಷದಿಂದ ಈ ಪ್ರಕ್ರಿಯೆಯನ್ನು ಕಾಲೇಜು ಹಂತದಲ್ಲೇ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.