ADVERTISEMENT

ಎನ್‌ಆರ್‌ಐ ಕೋಟಾ ಇಳಿಕೆ, ಶಿಫಾರಸಿಗೆ ಚಿಂತನೆ: ಕೆಇಎ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 16:07 IST
Last Updated 22 ಜುಲೈ 2025, 16:07 IST
ಕೆಇಎ
ಕೆಇಎ   

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ಕೋರ್ಸ್‌ಗಳಲ್ಲಿ ಎನ್‌ಆರ್‌ಐ ಕೋಟಾ ಹಾಗೂ ಎನ್‌ಆರ್‌ಐ ಪ್ರಾಯೋಜಿತ ಸೀಟುಗಳ ದುರುಪಯೋಗ ತಡೆಗಟ್ಟಲು ರಾಜ್ಯದಲ್ಲಿನ ಎನ್‌ಆರ್‌ಐ ಕೋಟಾದ ಸೀಟುಗಳ ಸಂಖ್ಯೆಯನ್ನು ಶೇ 5ಕ್ಕೆ ಇಳಿಸುವಂತೆ, ಈ ಕುರಿತು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕೆಇಎ ಚಿಂತನೆ ನಡೆಸಿದೆ.

ಈಗಿರುವ ನಿಯಮಗಳ ಪ್ರಕಾರ ಎನ್‌ಆರ್‌ಐ ಕೋಟಾದ ಅಡಿ ಪ್ರವೇಶ ಪಡೆಲು ವಿದ್ಯಾರ್ಥಿಯ ಒಬ್ಬ ಪೋಷಕರು ಎನ್‌ಆರ್‌ಐ ಆಗಿರಬೇಕು. ಇಲ್ಲವೇ, ವಿದೇಶದಲ್ಲಿ ನೆಲೆ ನಿಂತಿರಬೇಕು. ಎನ್‌ಆರ್‌ಐ ಪ್ರಾಯೋಜಕತ್ವದ ಅಡಿ ಸೀಟು ಪಡೆಯಲು ಪ್ರಾಯೋಜನೆ ಮಾಡುವ ವ್ಯಕ್ತಿ ಆ ವಿದ್ಯಾರ್ಥಿಯ ಮೊದಲ ಸಂಬಂಧಿಯಾಗಿರಬೇಕು. ಇಲ್ಲದಿದ್ದರೆ ಎನ್‌ಆರ್‌ಐ ಕೋಟಾ ಪಡೆಯಲು ಅವಕಾಶವಿಲ್ಲ.   

‘ಎನ್‌ಆರ್‌ಐ ಕೋಟಾದ ಅಡಿ ವೈದ್ಯಕೀಯ ಸೀಟು ಪಡೆಯಲು ಈ ಬಾರಿ 100ಕ್ಕೂ ಹೆಚ್ಚು ದೇಶಗಳಿಂದ ಪ್ರಮಾಣಪತ್ರ ತಂದಿದ್ದಾರೆ. ಅವುಗಳನ್ನು ಪರಿಶೀಲಿಸಲು ಪ್ರಾಧಿಕಾರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಮಧ್ಯವರ್ತಿಗಳು ಹಣ ಪಡೆದು ಪೋಷಕರು ಮತ್ತು ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಎನ್‌ಆರ್‌ಐ ಕೋಟಾದ ಸೀಟುಗಳು ಯಾವ ವರ್ಷವೂ ಪೂರ್ಣ ಭರ್ತಿಯಾಗುತ್ತಿಲ್ಲ. ಪ್ರತಿ ವರ್ಷ ಶೇ 70ರಿಂದ 80ರಷ್ಟು ಸೀಟು ಉಳಿಯುತ್ತವೆ. ಹಾಗಾಗಿ, ಕೋಟಾದ ಪ್ರಮಾಣ ಕಡಿಮೆ ಮಾಡಬೇಕಿದೆ’ ಎನ್ನುತ್ತಾರೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.