ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 25ವರ್ಷ ತುಂಬುವವರೆಗೆ ಹೊಸ ನಿಲ್ದಾಣ ಇಲ್ಲ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 14:32 IST
Last Updated 29 ಜನವರಿ 2026, 14:32 IST
<div class="paragraphs"><p>ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ</p></div>

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

   

ನವದೆಹಲಿ: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 25 ವರ್ಷ ತುಂಬುವವರೆಗೆ (2033ರ ವರೆಗೆ) ಬೆಂಗಳೂರಿನಲ್ಲಿ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅವಕಾಶ ಇಲ್ಲ‘ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೊಲ್‌ ಸ್ಪಷ್ಟಪಡಿಸಿದರು. 

ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಕೆಂಪೇಗೌಡ ವಿಮಾನ ನಿಲ್ದಾಣದ 150 ಕಿ.ಮೀ. ವೈಮಾನಿಕ ವ್ಯಾಪ್ತಿಯಲ್ಲಿ ಮೈಸೂರು ಹಾಗೂ ಹಾಸನ ವಿಮಾನ ನಿಲ್ದಾಣ ಹೊರತುಪಡಿಸಿ ಬೇರೆ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಅನುಮತಿ ಇಲ್ಲ ಎಂದು ಈ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿದೆ‘ ಎಂದರು.

ADVERTISEMENT

‘ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ನೀತಿ 2008ರ ಪ್ರಕಾರ, ಅಸ್ತಿತ್ವದಲ್ಲಿರುವ ನಾಗರಿಕ ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್‌ಗಳ ವೈಮಾನಿಕ ಅಂತರದೊಳಗೆ ಸಾಮಾನ್ಯವಾಗಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅನುಮತಿ ನೀಡುವುದಿಲ್ಲ. ಆದಾಗ್ಯೂ, ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳ ಮೇಲೆ ಅದರ ಪರಿಣಾಮ ಪರಿಶೀಲಿಸಿದ ನಂತರ, ಪ್ರಕರಣದಿಂದ ಪ್ರಕರಣಕ್ಕೆ ಅನುಗುಣವಾಗಿ ಅನುಮತಿಸಲು ಅವಕಾಶ ಇದೆ‘ ಎಂದರು. 

‘ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದ ವಿಮಾನ ನಿಲ್ದಾಣಗಳ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಅನುವು ಮಾಡಿಕೊಟ್ಟರೆ ಪ್ರಾಧಿಕಾರಕ್ಕೆ ಕೇಂದ್ರ/ರಾಜ್ಯ ಸರ್ಕಾರ ಅಥವಾ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವವರು ಪರಿಹಾರ ನೀಡಬೇಕು ಎಂಬ ನಿಯಮ ಇದೆ. ಆದರೆ, ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಗರಿಷ್ಠ ಮಟ್ಟ ತಲುಪದಿದ್ದರೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಪರಿಹಾರಕ್ಕೆ ಪರ್ಯಾಯವಾಗಿ, ಹೊಸ ವಿಮಾನ ನಿಲ್ದಾಣದಲ್ಲಿ ಶೇ 26ರಿಂದ ಶೇ 49ರ ವರೆಗೆ ಪಾಲು ನೀಡಲು ಅವಕಾಶ ಇದೆ’ ಎಂದು ಅವರು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.