ಬೆಂಗಳೂರು: ‘ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ ₹100 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
‘ನಾಡಪ್ರಭು ಕೆಂಪೇಗೌಡ ಪ್ರಾಧಿಕಾರ’ದ ಸಭೆಯನ್ನು ಶನಿವಾರ ನಡೆಸಿದ ಅವರು, ಯೋಜನೆಗಳ ಪ್ರಗತಿಯ ಮಾಹಿತಿ ಪಡೆದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರ ವಿನ್ಯಾಸ ಕಾಲೇಜಿನಲ್ಲಿ ಸುಮಾರು 300 ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶ ನೀಡಲಾಗುವುದು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಯಾರಿಸಿದ ಪಠ್ಯಕ್ರಮ ಅಳವಡಿಸಿಕೊಳ್ಳುವ ಕುರಿತು ಚರ್ಚೆ ನಡೆದಿದೆ. ನಗರ ವಿನ್ಯಾಸ ಅಧ್ಯಯನ ಮಾಡಿದವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮತ್ತು ಪಾಲಿಕೆಗಳಲ್ಲಿ ಉದ್ಯೋಗ ನೀಡಲಾಗುವುದು. ಕಾಲೇಜು ನಿರ್ಮಾಣಕ್ಕಾಗಿ ನಗರಾಭಿವೃದ್ದಿ ಇಲಾಖೆ, ಕೆಂಪೇಗೌಡ ಪ್ರಾಧಿಕಾರ ಮತ್ತು ಜಿಬಿಎಯಿಂದ ಅನುದಾನ ಮೀಸಲಿಡಲಾಗಿದೆ’ ಎಂದರು.
ಸುಮನಹಳ್ಳಿಯ ಬಳಿ ಐದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಕೆಂಪೇಗೌಡ ಭವನಕ್ಕೆ ವಾಸ್ತುಶಿಲ್ಪಿಗಳಿಂದ ಅತ್ಯುತ್ತಮ ವಿನ್ಯಾಸ ಆಹ್ವಾನಿಸಲಾಗಿದೆ. ಕೆಂಪೇಗೌಡರ ಎಲ್ಲಾ ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಲು ₹103 ಕೋಟಿ ಅನುದಾನ ನೀಡಲಾಗಿದೆ. ಮಾಗಡಿ ಕೋಟೆಯ ಪುನರುಜ್ಜೀವನ ಕೆಲಸ ಶೇ 50ರಷ್ಟು ಮುಗಿದಿದೆ. ಆಂತರಿಕ ಸಮನ್ವಯತೆ ಸಾಧಿಸಲು ಸಮಿತಿ ರಚಿಸಲಾಗುವುದು. ಕೆಂಪೇಗೌಡರ ಸಮಾಧಿ ಸ್ಥಳದಲ್ಲಿ 10 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು, ಶೇ 90 ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಅ.8ಕ್ಕೆ ಸಭೆ: ನಗರದಲ್ಲಿ ಎಲ್ಲೆಂದರಲ್ಲಿ ಕೇಬಲ್‌ಗಳನ್ನು ಎಳೆಯಲಾಗಿದೆ. ಬೆಸ್ಕಾಂಗೆ ಸೇರಿದ ಕಂಬಗಳಲ್ಲಿ ಟಿ.ವಿ ಕೇಬಲ್‌ಗಳು ನೇತಾಡುತ್ತಿವೆ. ಸಮಸ್ಯೆ ಬಗೆಹರಿಸಲು ಸಚಿವ ಕೆ.ಜೆ.ಜಾರ್ಜ್ ಅವರ ಜತೆ ಅ.8ರಂದು ಸಭೆ ನಡೆಸಲಾಗುವುದು. ನಾಲ್ಕು ಲಕ್ಷ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವುದರ ಬಗ್ಗೆ ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ಎ ಹಾಗೂ ಬಿ ಖಾತಾ ವಿಚಾರವಾಗಿಯೂ ಚರ್ಚಿಸಲಾಗುವುದು ಎಂದು ಹೇಳಿದರು.
ಎಲ್ಲಿಂದರಲ್ಲಿ ಕಸ ಎಸೆಯುವವರಿಂದ ₹1 ಕೋಟಿ ದಂಡ ಸಂಗ್ರಹಿಸಲಾಗಿದೆ. ಕಸ ಸಂಗ್ರಹ ವಾಹನಗಳು ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗುವುದುಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.