ADVERTISEMENT

ಕೆಎಚ್‌ಬಿ: 10 ಸಾವಿರ ಫ್ಲ್ಯಾಟ್‌

ಎ.ಎಂ.ಸುರೇಶ
Published 20 ಆಗಸ್ಟ್ 2025, 20:35 IST
Last Updated 20 ಆಗಸ್ಟ್ 2025, 20:35 IST
   

ಬೆಂಗಳೂರು: ಬಡವರು ಹಾಗೂ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟು ಕೈಗೆಟಕುವ ದರದಲ್ಲಿ ಲಭ್ಯ
ವಾಗುವ ಹತ್ತು ಸಾವಿರ ಫ್ಲ್ಯಾಟ್‌ಗಳನ್ನು ನಿರ್ಮಿಸಲು ಕರ್ನಾಟಕ ಗೃಹ ಮಂಡಳಿ ಮುಂದಾಗಿದೆ.

ಬೆಂಗಳೂರಿನಲ್ಲಿ ಫ್ಲ್ಯಾಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆರಂಭಿಕ ಹಂತದಲ್ಲಿ ಸೂರ್ಯನಗರ ನಾಲ್ಕನೇ ಹಂತ ಮತ್ತು ಬ್ಯಾಲಾಳು ಬಳಿ ಫ್ಲ್ಯಾಟ್‌ಗಳನ್ನು ನಿರ್ಮಿಸುವ ಯೋಚನೆ ಇದೆ. ಬೇಡಿಕೆ ಹಾಗೂ ಜಮೀನಿನ ಲಭ್ಯತೆ ಆಧರಿಸಿ ನಗರದ ಬೇರೆ ಬೇರೆ ಭಾಗಗಳಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಐದೂವರೆ ಚದರ ವಿಸ್ತೀರ್ಣದ 1 ಬಿಎಚ್‌ಕೆ ಹಾಗೂ ಏಳೂವರೆ ಚದರ ವಿಸ್ತೀರ್ಣದ 2 ಬಿಎಚ್‌ಕೆ ಫ್ಲ್ಯಾಟ್‌
ಗಳನ್ನು ಜಿ+3 ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಫ್ಲ್ಯಾಟ್‌ ನಿರ್ಮಾಣ ಯೋಜನೆಯನ್ನು ಕಾರ್ಯಗತಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಯಾವುದಾದರೂ ಭಾಗದಿಂದ ಬೇಡಿಕೆ ಬಂದರೆ, ಅಲ್ಲೂ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ವಿವರಿಸಿದರು.

ADVERTISEMENT

ಹೊಸ ಬಡಾವಣೆ: ಬಿ.ಎಂ.ಕಾವಲ್‌ನಲ್ಲಿ 314 ಎಕರೆ ಜಾಗದಲ್ಲಿ ಹೊಸ ಬಡಾವಣೆ ನಿರ್ಮಿಸಲು ಗೃಹ ಮಂಡಳಿ ತೀರ್ಮಾನಿಸಿದೆ. ರೈತರಿಂದ ಜಮೀನು ಪಡೆದು 50:50 ಅನುಪಾತದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಪ್ಪಂದದ ಪ್ರಕಾರ ಶೇ 50ರಷ್ಟು ನಿವೇಶನಗಳನ್ನು ರೈತರಿಗೆ ನೀಡಲಾಗುತ್ತದೆ. ಇನ್ನುಳಿದ 50ರಷ್ಟು ನಿವೇಶನಗಳನ್ನು ಲಾಟರಿ ಮೂಲಕ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತದೆ.

ಈಗಾಗಲೇ ಪ್ರಾಥಮಿಕ ಪ್ರಕ್ರಿಯೆಗಳು ಶುರುವಾಗಿವೆ. ಡಿಸೆಂಬರ್‌ ವೇಳೆಗೆ ಬಡಾವಣೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸಿವಿಲ್‌ ಕಾಮಗಾರಿ ಆರಂಭವಾದ ಬಳಿಕ, ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ಅವರು ವಿವರಿಸಿದರು.

‘ಸುಮಾರು ಐದು ಸಾವಿರ ನಿವೇಶನಗಳು ಲಭ್ಯವಾಗಲಿವೆ. ಮೂಲೆ ನಿವೇಶನಗಳನ್ನು ರೈತರಿಗೆ ನೀಡುವುದಿಲ್ಲ. ಒಪ್ಪಂದದ ಪ್ರಕಾರ ಮೂಲೆ ನಿವೇಶನಗಳನ್ನು ಮಂಡಳಿಯೇ ಹರಾಜು ಮೂಲಕ ಹಂಚಿಕೆ ಮಾಡಲಿದೆ. ಮಂಡಳಿಗೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಸಿಬ್ಬಂದಿ ಸಂಬಳ ಸೇರಿದಂತೆ ಎಲ್ಲ ರೀತಿಯ ವೆಚ್ಚಗಳಿಗೆ ಮಂಡಳಿಯೇ ಸಂಪನ್ಮೂಲಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಮೂಲೆ ನಿವೇಶನಗಳ ಹರಾಜಿನಿಂದ ಬರುವ ಹಣವನ್ನು ಇದಕ್ಕೆ ಬಳಸಿಕೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

ನಿವೇಶನಗಳಿಗೆ ಹೆಚ್ಚಿನ ಬೇಡಿಕೆ

ಗೃಹ ಮಂಡಳಿಯ ನಿವೇಶನಗಳಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇದೆ. ಆದರೆ, ಹೊಸ ಬಡಾವಣೆಗಳ ನಿರ್ಮಾಣಕ್ಕೆ ಮೊದಲಿನ ಹಾಗೆ ಜಾಗ ಸಿಗುವುದಿಲ್ಲ. ಜಮೀನು ನೀಡಲು ರೈತರು ಸುಲಭವಾಗಿ ಒಪ್ಪುವುದಿಲ್ಲ. ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯಕ್ಕೆ ಹೋದರೆ ಬೇಗ ಇತ್ಯರ್ಥವಾಗುವುದಿಲ್ಲ. ಹೀಗಾಗಿ ಹೊಸ ಬಡಾವಣೆಗಳ ನಿರ್ಮಾಣ ಸುಲಭವಾಗಿ ಆಗುವುದಿಲ್ಲ ಎಂದು ಮಂಡಳಿಯ ಎಂಜಿನಿಯರ್‌ ವಸ್ತುಸ್ಥಿತಿಯನ್ನು ವಿವರಿಸಿದರು.

ನಿವೇಶನಕ್ಕೆ ಸಂಬಂಧಿಸಿ, ವಿವಾದಗಳು ಇರುವುದಿಲ್ಲ ಎಂಬ ಕಾರಣಕ್ಕೆ ನಾಗರಿಕರು ಕೆಎಚ್‌ಬಿ ನಿವೇಶನ ಖರೀದಿಗೆ ಮುಂದೆ ಬರುತ್ತಾರೆ. ನಿವೇಶನಗಳ ಸಂಖ್ಯೆಗಿಂತ ಅರ್ಜಿಗಳ ಸಂಖ್ಯೆ ಅಧಿಕವಾಗಿರುವ ಕಾರಣ ಲಾಟರಿ ಮೂಲಕ ಹಂಚಿಕೆ ಮಾಡುತ್ತಿದ್ದೇವೆ. ಹೀಗಾಗಿ ಅರ್ಜಿ ಹಾಕಿದ ಎಲ್ಲರಿಗೂ ಸಿಗುವುದಿಲ್ಲ, ಬೇರೆ ಕಡೆ ಬಡಾವಣೆ ನಿರ್ಮಿಸಿದಾಗ ಮತ್ತೆ ಪ್ರಯತ್ನ ಮಾಡಬಹುದು ಎಂದು ತಿಳಿಸಿದರು.

ಫ್ಲ್ಯಾಟ್‌ ಮಾದರಿ ದರ (ತಾತ್ಕಾಲಿಕ)

1 ಬಿಎಚ್‌ಕೆ ₹25 ಲಕ್ಷದಿಂದ ₹30 ಲಕ್ಷ

2 ಬಿಎಚ್‌ಕೆ ₹35 ಲಕ್ಷದಿಂದ ₹40 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.