ADVERTISEMENT

ಹಾಸ್ಟೆಲ್‌ ಮಕ್ಕಳಿಗೆ ಕಿಟ್‌: ಟೆಂಡರ್‌ ಆಹ್ವಾನಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2023, 15:51 IST
Last Updated 30 ಸೆಪ್ಟೆಂಬರ್ 2023, 15:51 IST

ಬೆಂಗಳೂರು: ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಗಳ ಅಡಿಯಲ್ಲಿರುವ ವಿದ್ಯಾರ್ಥಿನಿಲಯಗಳಲ್ಲಿರುವ ಮಕ್ಕಳಿಗೆ ಕಿಟ್‌ ವಿತರಣೆ ಪ್ರಕ್ರಿಯೆಯನ್ನು ಟೆಂಡರ್ ಮೂಲಕವೇ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆ ತೀರ್ಮಾನಿಸಿದೆ.

ಈ ಮೂರೂ ಇಲಾಖೆಯ ಮುಖ್ಯಸ್ಥರ ಸಭೆ ಶನಿವಾರ ನಡೆಯಿತು. 

ಈ ವಿದ್ಯಾರ್ಥಿನಿಲಯಗಳಲ್ಲಿ 5.48 ಲಕ್ಷ ಮಕ್ಕಳಿದ್ದಾರೆ. ಈ ಪೈಕಿ, ಗಂಡು ಮಕ್ಕಳಿಗೆ ₹93 ವೆಚ್ಚದಲ್ಲಿ ಟೂತ್ ಬ್ರಶ್, ಪೇಸ್ಟ್, ಕೊಬ್ಬರಿ ಎಣ್ಣೆ, ಮೈ ಸೋಪು, ಬಟ್ಟೆ ಸೋಪು ಒಳಗೊಂಡ ಕಿಟ್, ಹೆಣ್ಣು ಮಕ್ಕಳಿಗೆ ₹135 ‌ವೆಚ್ಚದಲ್ಲಿ ‘ಶುಚಿ ಸಂಭ್ರಮ’ ಕಿಟ್‌ ವಿತರಿಸಲು ವಾರ್ಷಿಕ ₹90 ಕೋಟಿ ವೆಚ್ಚವಾಗಲಿದೆ.‌

ADVERTISEMENT

‘ಶುಚಿ ಸಂಭ್ರಮ’ ಕಿಟ್‌ನಲ್ಲಿದ್ದ ಟೂತ್ ಬ್ರಶ್, ಪೇಸ್ಟ್, ಸೋಪು, ಕೊಬ್ಬರಿ ಎಣ್ಣೆಯ ಗುಣಮಟ್ಟದ ಬಗ್ಗೆ ಗರಂ ಆದ ಮುಖ್ಯಮಂತ್ರಿ, ಈ ವಸ್ತುಗಳ ತೂಕದ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಿಟ್‌ನಲ್ಲಿ ಸದ್ಯ 75 ಗ್ರಾಂನ ಸೋಪು ಇದ್ದು ಅದನ್ನು 125 ಗ್ರಾಂಗೆ ಹೆಚ್ಚಿಸಬೇಕು. ಇದರಲ್ಲಿ ಕೇವಲ ಶೇ 5‌ರಷ್ಟು ಮಾತ್ರ ಲಾಭ ಇಟ್ಟುಕೊಳ್ಳಬೇಕು ಎಂದು ಮೈಸೂರು ಸೋಪ್ಸ್ ಆ್ಯಂಡ್‌ ಡಿಟರ್ಜೆಂಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿ ಸೂಚಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ನಾತಕೋತ್ತರ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಲ್ಯಾಪ್‌ಟಾಪ್ ಖರೀದಿಸಿ ಕೊಡಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಆಹಾರಧಾನ್ಯಗಳಿಗಾಗಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ತಲಾ ₹1,650, ಮೆಟ್ರಿಕ್ ನಂತರದವರಿಗೆ ₹1,750 ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತಾಲ್ಲೂಕುವಾರು ಪ್ಯಾಕೇಜ್‌ಗಳ ಟೆಂಡರ್ ಕರೆದು ರಾಗಿ, ಧಾನ್ಯ, ಎಣ್ಣೆಯನ್ನು ಪಡೆಯಲಾಗುತ್ತಿದೆ. ಈ ವ್ಯವಸ್ಥೆಯನ್ನು ಸರಿಪಡಿಸಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಟೆಂಡರ್ ಕರೆಯುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲು ಪ್ರಸ್ತಾವನೆ ಸಲ್ಲಿಸಬೇಕು. ಆಹಾರಧ್ಯಾನ ಪಡೆಯುವ ಕುರಿತ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಬೇಕು’ ಎಂದೂ ಸೂಚಿಸಿದರು.

‘ಹೋಬಳಿಗೆ ಒಂದರಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಕ್ರೈಸ್‌) ಶಾಲೆ ಇರಬೇಕೆಂದು ಆದೇಶಿಸಲಾಗಿದೆ. ಆದರೆ, 178 ಹೋಬಳಿಗಳಲ್ಲಿ ಕ್ರೈಸ್ ಶಾಲೆಗಳಿಲ್ಲ. ಕೆಲವು ಹೋಬಳಿಗಳಲ್ಲಿ 3-4 ಶಾಲೆಗಳಿವೆ. ಕಸಬಾ ಹೋಬಳಿ ತೆಗೆದರೆ 134 ಶಾಲೆಗಳನ್ನು ತೆರೆಯಬೇಕಿದೆ. ಸ್ವಂತ ಕಟ್ಟಡ ಇಲ್ಲದ ಶಾಲೆಗಳಿದ್ದರೆ, ಅದೇ ಕ್ಷೇತ್ರದ ಮತ್ತೊಂದು ಹೋಬಳಿಗೆ ಶಾಲೆಯನ್ನು ಸ್ಥಳಾಂತರಿಸಬೇಕು. ಐಸೆಕ್ ಮತ್ತು ಐಐಎಸ್‌ಸಿ ಮೂಲಕ ಕ್ರೈಸ್ ಶಾಲೆಗಳ ಶಿಕ್ಷಕರ ಮೌಲ್ಯಮಾಪನ ಮಾಡಿಸಬೇಕು’ ಎಂದೂ ಮುಖ್ಯಮಂತ್ರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.