ADVERTISEMENT

ರಾಜೀನಾಮೆ ಸದ್ದು; ಸುಳ್ಳೆಂದ ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಇಲಾಖೆಯಲ್ಲಿ ಸಿ.ಎಂ ಪುತ್ರ ಯತೀಂದ್ರ ಹಸ್ತಕ್ಷೇಪ: ಬಿಜೆಪಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 15:43 IST
Last Updated 29 ಜನವರಿ 2026, 15:43 IST
ಕೆ.ಜೆ. ಜಾರ್ಜ್‌
ಕೆ.ಜೆ. ಜಾರ್ಜ್‌   

ಬೆಂಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ಗುರುವಾರ ಬೆಳಿಗ್ಗೆ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿ, ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು.

ಈ ವೇಳೆ ಸದನದಲ್ಲಿದ್ದ ಕೆ.ಜೆ. ಜಾರ್ಜ್‌, ‘ನಾನು ರಾಜೀನಾಮೆ ಕೊಟ್ಟಿಲ್ಲ. ಮುಖ್ಯಮಂತ್ರಿ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ’ ಎಂದು ಸ್ಪಷ್ಟನೆಯನ್ನೂ ನೀಡಿದರು.

ಸದನದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸುಳ್ಳು ಸುದ್ದಿ. ಜಾರ್ಜ್ ರಾಜೀನಾಮೆ ಕೊಟ್ಟಿಲ್ಲ’ ಎಂದರು.

ADVERTISEMENT

ವಿಧಾನಸಭೆ ಕಲಾಪದ ಮಧ್ಯೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿ. ಸುನಿಲ್‌ ಕುಮಾರ್‌, ‘ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಅವರ ಪುತ್ರ ಯತೀಂದ್ರ ಅವರ ಹಸ್ತಕ್ಷೇಪದಿಂದ ಬೇಸರಗೊಂಡು ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆ ಕೊಟ್ಟಿದ್ದಾರೆಂದು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ಈ ಬಗ್ಗೆ ಸಚಿವರೇ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.

ಆಗ ಪ್ರತಿಕ್ರಿಯಿಸಿದ ಜಾರ್ಜ್‌, ‘ನಾನು ರಾಜೀನಾಮೆ ಕೊಡಲು ಮುಂದಾಗಿದ್ದೇನೆಂದು ಮಾಧ್ಯಮಗಳಲ್ಲಿ ಬರುತ್ತಿದೆ ಎಂದು ಹೇಳಿದ್ದಾರೆ‌. ನಾನು ಮಾಧ್ಯಮಗಳಿಗೆ ಹೇಳಿದ್ದೇನಾ’ ಎಂದು ಪ್ರಶ್ನಿಸಿದರು.

‘ಹಿಂದೆಲ್ಲಾ ದಿನಕ್ಕೆ ಮೂರು ಬಾರಿ ನ್ಯೂಸ್ ಬರುತ್ತಿತ್ತು. ಈಗ ಗಂಟೆಗೊಂದು ಬ್ರೇಕಿಂಗ್ ನ್ಯೂಸ್ ಬರುತ್ತಿದೆ. ಅವರೇ (ಸುದ್ದಿ ವಾಹಿನಿಗಳು) ಸೃಷ್ಟಿ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಬುಧವಾರ ನಡೆದ ಸಿಎಲ್‌ಪಿ ಸಭೆಯಲ್ಲೂ ನಾನು ಭಾಗಿಯಾಗಿದ್ದೆ. ನನಗೆ ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಮತ್ತು ಬೆಂಬಲ ಇದೆ’ ಎಂದೂ ಹೇಳಿದರು.

ಬಳಿಕ ವಿಧಾನಸಭೆಯ ಮೊಗಸಾಲೆಯಲ್ಲಿ ಅನೌಪಚಾರಿಕವಾಗಿ ಮಾತನಾಡಿದ ಜಾರ್ಜ್, ‘ನಾನು ಮುಖ್ಯಮಂತ್ರಿ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ. ಅನಗತ್ಯವಾಗಿ ಸುಳ್ಳು ಸುದ್ದಿ‌ ಹಾಕುವುದು ಯಾಕೆ? ನನ್ನ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ’ ಎಂದು ಮಧ್ಯಮಗಳ ಮೇಲೆ ಬೇಸರ ವ್ಯಕ್ತಪಡಿಸಿದರು.

‘ಒಬ್ಬರು ಸಚಿವರು ರಾಜೀನಾಮೆ ಕೊಡುವುದು ಅಷ್ಟು ಸುಲಭವೇ? ರಾಜೀನಾಮೆ ಕೊಡುತ್ತಾರಾ? ನಾನು ಯಾವ ಅಧಿಕಾರಿಯ ವಿಚಾರದಲ್ಲಿಯೂ ಪಟ್ಟು ಹಿಡಿಯುವುದಿಲ್ಲ. ನಮ್ಮ ಇಲಾಖೆಯಲ್ಲಿ ಯತೀಂದ್ರ (ಸಿದ್ದರಾಮಯ್ಯ ಅವರ ಪುತ್ರ) ಅವರ ಯಾವುದೇ ಹಸ್ತಕ್ಷೇಪ ಇಲ್ಲ. ಅವರು ಒಳ್ಳೆಯವರು. ಅವರಿಗೆ ಯಾಕೆ ಸುಮ್ಮನೆ ಕೆಟ್ಟ ಹೆಸರು’ ಎಂದರು.

‘ನಾನು ಗಣಪತಿ ಪ್ರಕರಣದಲ್ಲಿ ರಾಜೀನಾಮೆ ಕೊಡುವಾಗ ಸುದ್ದಿಗೋಷ್ಠಿ ಮಾಡಿಯೇ ಕೊಟ್ಟಿದ್ದೇನೆ. ನಾ‌ನು ಮತ್ತು ಮುಖ್ಯಮಂತ್ರಿ ಪ್ರತಿದಿನ ಮಾತನಾಡುತ್ತೇವೆ. ಅದಕ್ಕೆ ನಿಮ್ಮ ಅನುಮತಿ ಪಡೆಯಬೇಕೇ’ ಎಂದೂ ಪ್ರಶ್ನಿಸಿದರು.‌

‘ಪಂಕಜ್ ಕುಮಾರ್ ಪಾಂಡೆ ವಿಚಾರ ಎಲ್ಲವೂ ಸೃಷ್ಟಿ ಅಷ್ಟೇ’ ಎಂದರು.

ಜಾರ್ಜ್‌ ಅಸಮಾಧಾನ?

ಇಂಧನ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ತಮ್ಮನ್ನು ವಿಶ್ವಾಸಕ್ಕೆ ಪಡೆಯದೆ ಕ್ರಮ ತೆಗೆದುಕೊಳ್ಳಲಾಗಿದೆ. ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡುತ್ತಿದ್ದರೆಂದು ಅಸಮಾಧಾನಗೊಂಡು ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ನೀಡಲು ಕೆ.ಜೆ. ಜಾರ್ಜ್ ಮುಂದಾಗಿದ್ದರು. ಆಗ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣ ಮಧ್ಯಪ್ರವೇಶಿಸಿ ಜಾರ್ಜ್ ಅವರ ಮನವೊಲಿಸಿದರು ಎಂಬ ಚರ್ಚೆ ನಡೆದಿದೆ. ಈ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಪೊನ್ನಣ್ಣ‌ ‘ಆ ರೀತಿಯದ್ದು ಏನೂ ಆಗಿಲ್ಲ. ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದಮೇಲೆ ಸಂಧಾನ ಮಾಡುವ ಪ್ರಶ್ನೆ ಎಲ್ಲಿದೆ? ಮುಖ್ಯಮಂತ್ರಿ ಜೊತೆ ಜಾರ್ಜ್‌ ಅವರ ಸಂಬಂಧ ಚೆನ್ನಾಗಿದೆ. ಆ ಸಂಬಂಧ ಕೆಡಿಸಲು ವಿರೋಧ ಪಕ್ಷದವರು ಹೀಗೆ ಮಾಡಿರಲೂಬಹುದು’ ಎಂದರು. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪೊನ್ನಣ್ಣ ‘ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಕೆಲವು ಸಭೆಗಳಿಗೆ ಹಾಜರಾಗಿಲ್ಲವೆಂಬ ಕಾರಣಕ್ಕೆ ನೋಟಿಸ್‌ ನೀಡಲು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ನೋಟಿಸ್‌ಗೆ ಅವರು ಉತ್ತರ ಕೊಟ್ಟಿದ್ದಾರೆ. ಅದು ಮುಗಿದ ಕಥೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.