ADVERTISEMENT

‘ಕಲ್ಯಾಣ’ ಹಣ ದುರ್ಬಳಕೆ?

ಕೆಕೆಆರ್‌ಡಿಬಿ, ಸಂಘದ ಮೇಲೆ ಆರೋಪ: ಇಂದಿನಿಂದ ಪರಿಶೀಲನೆ

ರಾಜೇಶ್ ರೈ ಚಟ್ಲ
Published 11 ಜೂನ್ 2023, 20:13 IST
Last Updated 11 ಜೂನ್ 2023, 20:13 IST
   

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ‘ಕಲ್ಯಾಣ’ಕ್ಕೆಂದು ರಾಜ್ಯ ಸರ್ಕಾರ ನೀಡಿದ್ದ ಅನುದಾನವನ್ನು ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಅಕ್ರಮವಾಗಿ ಬಳಕೆ ಮಾಡಿರುವುದನ್ನು ಲಭ್ಯ ದಾಖಲೆಗಳ ಆಧಾರದಲ್ಲಿ ಪತ್ತೆ ಮಾಡಿರುವ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಮುಖ್ಯಮಂತ್ರಿ ಸಚಿವಾಲಯಕ್ಕೆ ಸಲ್ಲಿಸಲು ವರದಿ ಸಿದ್ಧಪಡಿಸಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) 2022–23ನೇ ಸಾಲಿನಲ್ಲಿ ₹ 3,000 ಕೋಟಿ ನೀಡಲಾಗಿದ್ದು, ಹಳೆ ಬಾಕಿಯೂ ಸೇರಿ ₹ 3,683.59 ಕೋಟಿಯಲ್ಲಿ ಮಾರ್ಚ್‌ 2023 ರವರೆಗೆ ಶೇ 43ರಷ್ಟು ಮಾತ್ರ ವೆಚ್ಚವಾಗಿದೆ. ಒಟ್ಟು ಹಣದಲ್ಲಿ ಶೇ 60 ರಷ್ಟು ಕೂಡಾ ವೆಚ್ಚ ಆಗಿಲ್ಲ. ಅಲ್ಲದೆ, ನಿಯಮಬಾಹಿರವಾಗಿ ಅನುದಾನ ಬಳಕೆ ಮಾಡಲಾಗಿದೆ ಎಂದು ಈ ವರದಿಯಲ್ಲಿ ಆರೋಪಿಸಲಾಗಿದೆ.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ₹ 300 ಕೋಟಿಯ ಕ್ರಿಯಾ ಯೋಜನೆಗೆ 2020ರಲ್ಲಿ ಸರ್ಕಾರ ಅನುಮೋದನೆ ನೀಡಿತ್ತು. 2020–21 ಮತ್ತು 2021–22ನೇ ಸಾಲಿನಲ್ಲಿ ತಲಾ ₹ 100 ಕೋಟಿಯಂತೆ ಒಟ್ಟು ₹ 200 ಕೋಟಿ ಒದಗಿಸಲಾಗಿದೆ. ಆದರೆ, ಸಂಘವು ಸರ್ಕಾರದ ಆದೇಶವನ್ನು ಧಿಕ್ಕರಿಸಿ, ಬೇಕಾಬಿಟ್ಟಿ ವೆಚ್ಚ ಮಾಡಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ.

ADVERTISEMENT

ಕೆಕೆಆರ್‌ಡಿಬಿ ಮತ್ತು ಸಂಘ ಅನುದಾನ ಬಳಕೆಯಲ್ಲಿ ವ್ಯಾಪಕ ಅಕ್ರಮ ಎಸಗಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ನಿಯಮಬಾಹಿರವಾಗಿ ಅನುದಾನ ವಿನಿಯೋಗ, ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿವಿರಗಳೊಂದಿಗೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಮೇ 29ರಂದು ಮುಖ್ಯಮಂತ್ರಿ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳು ಮತ್ತು ಮಂಡಳಿಯ ಕಾರ್ಯದರ್ಶಿ ಮತ್ತು ಸಂಘದ ಕಾರ್ಯದರ್ಶಿ ನೀಡಿದ ವಿವರಣೆಗಳ ಸಹಿತ ಪ್ರತ್ಯೇಕ ವರದಿಗಳನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಿದ್ಧಪಡಿಸಿದೆ.

ಕೆಕೆಆರ್‌ಡಿಬಿ ಮತ್ತು ಸಂಘದಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಾಣಿಸಿದೆ. ಏನೇನು ಲೋಪಗಳಾಗಿವೆ ಎಂದು ಪರಿಶೀಲಿಸಿ ವರದಿ ನೀಡಲು ತನಿಖಾ ತಂಡ ರಚಿಸಲಾಗಿದೆ
ಡಿ. ಸುಧಾಕರ್‌ ಯೋಜನೆ ಮತ್ತು ಸಾಂಖ್ಯಿಕ ಸಚಿವ

ಈ ಬೆಳವಣಿಗೆಗಳ ಬೆನ್ನಲ್ಲೆ, ಮಂಡಳಿ ಮತ್ತು ಸಂಘದ ಮೇಲಿನ ಅನುದಾನ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆ ಮತ್ತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಯೋಜನಾ ಇಲಾಖೆಯ ಎಡಿಬಿ ವಿಭಾಗದ ನಿರ್ದೇಶಕ ಡಿ. ಚಂದ್ರಶೇಖರಯ್ಯ ನೇತೃತ್ವದಲ್ಲಿ ಯೋಜನಾ ಸಚಿವರು ತಂಡ ರಚಿಸಿದ್ದಾರೆ. ಈ ತಂಡ ಸೋಮವಾರದಿಂದ (ಜೂನ್‌ 14) ನಾಲ್ಕು ದಿನ ಪರಿಶೀಲನೆ ನಡೆಸಲಿದೆ.

ಕೆಕೆಆರ್‌ಡಿಬಿ ಮತ್ತು ಸಂಘ ಅನುದಾನ ಬಳಕೆಯಲ್ಲಿ ವ್ಯಾಪಕ ಅಕ್ರಮ ಎಸಗಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ನಿಯಮಬಾಹಿರವಾಗಿ ಅನುದಾನ ವಿನಿಯೋಗ, ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿವಿರಗಳೊಂದಿಗೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಮೇ 29ರಂದು ಮುಖ್ಯಮಂತ್ರಿ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳು ಮತ್ತು ಮಂಡಳಿಯ ಕಾರ್ಯದರ್ಶಿ ಮತ್ತು ಸಂಘದ ಕಾರ್ಯದರ್ಶಿ ನೀಡಿದ ವಿವರಣೆಗಳ ಸಹಿತ ಪ್ರತ್ಯೇಕ ವರದಿಗಳನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಿದ್ಧಪಡಿಸಿದೆ.

ಈ ಬೆಳವಣಿಗೆಗಳ ಬೆನ್ನಲ್ಲೆ, ಮಂಡಳಿ ಮತ್ತು ಸಂಘದ ಮೇಲಿನ ಅನುದಾನ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆ ಮತ್ತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಯೋಜನಾ ಇಲಾಖೆಯ ಎಡಿಬಿ ವಿಭಾಗದ ನಿರ್ದೇಶಕ ಡಿ. ಚಂದ್ರಶೇಖರಯ್ಯ ನೇತೃತ್ವದಲ್ಲಿ ಯೋಜನಾ ಸಚಿವರು ತಂಡ ರಚಿಸಿದ್ದಾರೆ. ಈ ತಂಡ ಸೋಮವಾರದಿಂದ (ಜೂನ್‌ 14) ನಾಲ್ಕು ದಿನ ಪರಿಶೀಲನೆ ನಡೆಸಲಿದೆ.

ಪ್ರಿಯಾಂಕ್ ಖರ್ಗೆ

‘ಅನುದಾನ ಬಳಕೆಯಲ್ಲಿ ಅಕ್ರಮ ನಡೆದಿದೆ’

ಕಾನೂನುಗಳನ್ನು ಗಾಳಿಗೆ ತೂರಿ ಕೆಕೆಆರ್‌ಡಿಬಿ ಮತ್ತು ಸಂಘದಲ್ಲಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂವಿಧಾನದ 371ಜೆ ಅಡಿ ಕಾನೂನು ತಿದ್ದುಪಡಿ ಮಾಡಿ ನೀಡಿದ ಅನುದಾನವನ್ನು ದುರ್ಬಳಕೆ ಮಾಡಿರುವುದು ಕಣ್ಣಿಗೆ ಕಾಣುತ್ತದೆ. ಒಂದೇ ಟೆಂಡರ್‌ ಅನ್ನು 33 ಬಾರಿ ಕರೆದಿರುವುದೂ ನನ್ನ ಗಮನಕ್ಕೆ ಬಂದಿದೆ. ಸಂಘ ರಚಿಸಿರುವುದೇ ಕಾನೂನುಬಾಹಿರ. ಅಂಥದ್ದರಲ್ಲಿ, ಆ ಸಂಘಕ್ಕೆ ₹ 300 ಕೋಟಿಗೆ ಅನುಮೋದನೆ ನೀಡಿರುವುದು ಯಾವ ಕಾರಣಕ್ಕೂ ಒಪ್ಪುವಂಥದ್ದಲ್ಲ. ಸಂವಿಧಾನ ಮತ್ತು ಕಾನೂನು ಉಲ್ಲಂಘಿಸಿ ಅನುದಾನ ಬಳಕೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿ, ತಪ್ಪಿತಸ್ಥರಿಗೆ ಶಿಕ್ಷೆ ಖಚಿತ. ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

* ಕೆಕೆಆರ್‌ಡಿಬಿ ₹ 3683.59 ಕೋಟಿ 2022–23ನೇ ಸಾಲಿಗೆ ಲಭ್ಯವಿದ್ದ ಅನುದಾನ ₹ 1584.31 ಕೋಟಿ (ಶೇ 43) ಆಗಿರುವ ವೆಚ್ಚ ಆರೋಪ– ಕೆಟಿಪಿಪಿ ಕಾಯ್ದೆ ಉಲ್ಲಂಘನೆ ನಿಯಮಬಾಹಿರವಾಗಿ ವೆಚ್ಚ

* ಕಲ್ಯಾಣ ಸಂಘ ₹ 300 ಕೋಟಿ 2020ರಲ್ಲಿ ಅನುಮೋದನೆ ನೀಡಿದ್ದ ಕ್ರಿಯಾಯೋಜನೆ ಮೊತ್ತ ₹ 200 ಕೋಟಿ 2020–21 2021–22ರಲ್ಲಿ ಒದಗಿಸಿದ ಮೊತ್ತ ಆರೋಪ– ಸರ್ಕಾರದ ಆದೇಶ ಉಲ್ಲಂಘಿಸಿ ಬೇಕಾಬಿಟ್ಟಿ ವೆಚ್ಚ

ಕೆಕೆಆರ್‌ಡಿಬಿ ಮೇಲಿನ ಆರೋಪ

* ‘ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ–2022’ಕ್ಕೆ ₹ 3.30 ಕೋಟಿ ವೆಚ್ಚಕ್ಕೆ ಅನುಮತಿ. ₹ 4 ಕೋಟಿ ವೆಚ್ಚ

* ಸರ್ಕಾರದ ಅನುಮತಿ ಪಡೆಯದೆ ಮಂಡಳಿಯ ಬಡ್ಡಿ ಹಣದಲ್ಲಿ ಕಲಬುರಗಿ ಉತ್ಸವಕ್ಕೆ ₹ 4 ಕೋಟಿ ತಮ್ಮ ಹಂತದಲ್ಲೇ ಮಂಜೂರು

* ಕೆಟಿಪಿಪಿ ಕಾಯ್ದೆ ಅನ್ವಯ ವೆಚ್ಚ ಮಾಡದೆ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ ಅನುದಾನಕ್ಕಿಂತ ಹೆಚ್ಚು ಬಳಕೆ

* ಬಸ್‌ ಖರೀದಿಗೆ ಪ್ರಾದೇಶಿಕ ನಿಧಿಯಿಂದ (ಆರ್‌ಎಫ್‌) ₹ 45 ಕೋಟಿ ಬಳಸಬೇಕೆಂಬ ಸೂಚನೆ ಧಿಕ್ಕರಿಸಿ ಕೊಪ್ಪಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನೀಡಿದ್ದ ₹ 48.75 ಕೋಟಿ ಬಳಕೆ

* ಮುಖ್ಯಮಂತ್ರಿಯ ವಿವೇಚನೆಯಲ್ಲಿ ಸಿದ್ಧಪಡಿಸಿ ಅನುಮೋದಿಸಿದ್ದ ಕ್ರಿಯಾ ಯೋಜನೆ ಬದಲಿಸಿ ತಮ್ಮ ಹಂತದಲ್ಲಿ 37 ಪಿಎಚ್‌ಸಿಗಳಿಗೆ ಅನುಮೋದನೆ

* ಆರು ಪಿಎಚ್‌ಸಿಗಳನ್ನು ಸಿಎಚ್‌ಸಿಗಳಾಗಿ ಮೇಲ್ದರ್ಜೆಗೇರಿಸಲು ₹ 7 ಕೋಟಿ ನಿಗದಿಪಡಿಸಿದ್ದರೂ ಪ್ರತಿ ಪಿಎಚ್‌ಸಿಗೆ ₹ 3.50 ಕೋಟಿಯಂತೆ 21 ಕೋಟಿ ಕಾಮಗಾರಿಗೆ ಅನುಮೋದನೆ

* ಮುಖ್ಯಮಂತ್ರಿ ವಿವೇಚನೆಯಡಿ ₹ 86.90 ಕೋಟಿ ವೆಚ್ಚದಲ್ಲಿ 815 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೂ ಕಾಮಗಾರಿ ಅನುಷ್ಠಾನಗೊಳಿಸದೆ ಕರ್ತವ್ಯಲೋಪ

* ಎರಡು ವರ್ಷವಾದರೂ ಆರಂಭವಾಗದ ಕಾಮಗಾರಿಗಳನ್ನು ರದ್ದುಪಡಿಸುವಂತೆ ಯೋಜನಾ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯಿಸಿದ್ದರೂ ಪಾಲನೆಯಾಗಿಲ್ಲ

* ಗುತ್ತಿಗೆದಾರರಿಂದ ವಸೂಲು ಮಾಡಿರುವ ದಂಡ ಮತ್ತು ವಸತಿಗೃಹಗಳಿಂದ ಸಂಗ್ರಹವಾದ ಬಾಡಿಗೆ ಹಣವನ್ನು ಸ್ವಯಂ ನಿರ್ಣಯ ಕೈಗೊಂಡು ಬಳಕೆ

ಕಲ್ಯಾಣ ಕರ್ನಾಟಕ ಸಂಘದ ಮೇಲಿನ ದೂರು

* ಆರು ಜಿಲ್ಲೆಗಳಲ್ಲಿ  ಒಂದು ಕೋಟಿ ಸಸಿ ನೆಡಲಾಗಿದೆಯೆಂದು ₹ 3.10 ಕೋಟಿ ವೆಚ್ಚ * ದೇಸಿ ಹಸುಗಳ ಸಾಕಣೆಗೆ ₹ 3.22 ಕೋಟಿ ವೆಚ್ಚ

* ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಡಿಜಿಟಲ್‌ ಕ್ಲಾಸ್‌ ರೂಂ ಅಳವಡಿಸಲು ₹ 13.32 ಕೋಟಿ

* ಕಿರು ಉತ್ಪಾದನೆಗಳ ಉದ್ದಿಮೆ ಆರಂಭಿಸಲು ಯಂತ್ರೋಪಕರಣ ಪೂರೈಕೆಗೆ ₹ 5.76 ಕೋಟಿ

* ಸರ್ಕಾರೇತರ ಸಂಸ್ಥೆಗಳ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಕೌಶಲ ಕೇಂದ್ರಗಳಿಗೆ ಹೊಲಿಗೆ ಯಂತ್ರ ನೀಡಲು ₹ 2.73 ಕೋಟಿ

* ಸಂಘದ ವ್ಯಾಪ್ತಿಯ ಸಾಂಸ್ಕೃತಿಕ ಭವನ ಸ್ಥಾಪಿಸಲು ₹ 7.77 ಕೋಟಿ

* ಅನುಮೋದನೆ ಪಡೆಯದೆ ಯೋಜನೆಗಳ ಅನುಷ್ಠಾನ (ಕೋವಿಡ್‌ನಿಂದ ಮೃತಪಟ್ಟ ಖಾಸಗಿ ಶಾಲೆಗಳ ಶಿಕ್ಷಕರಿಗೆ ತಲಾ ₹ 50 ಸಾವಿರ ಪರಿಹಾರ ವಿತರಣೆ)

* ಅಧ್ಯಕ್ಷರ ವಿವೇಚನಾ ನಿಧಿಯಡಿ ಬಿಡುಗಡೆಯಾದ ಶೇ 5ಕ್ಕಿಂತ ಹೆಚ್ಚು ಹಣ ಬಳಕೆ

* ಸೇಡಂ ತಾಲ್ಲೂಕ ಅನ್ನು ಉಪವಿಭಾಗವಾಗಿ ಪರಿಗಣಿಸಿ ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಒಳಪಡುವ ಎಲ್ಲ ಜಿಲ್ಲೆಗಳಿಗೆ ಒದಗಿಸಿರುವಷ್ಟು ಅನುದಾನವನ್ನು ಆ ತಾಲ್ಲೂಕಿಗೆ (₹ 19.54 ಕೋಟಿ) ಬಿಡುಗಡೆ

* ಅನುಮೋದಿತ ಕ್ರಿಯಾ ಯೋಜನೆಯ ಅನುದಾನ ಇಷ್ಟಬಂದಂತೆ ವಿಭಜಿಸಿ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.