ADVERTISEMENT

ಹಾಲು ಖರೀದಿ ದರ ಕಡಿತ

ಜೂನ್‌ 1ರಿಂದ ಲೀಟರ್‌ಗೆ ₹1.50 ಕಡಿಮೆ ಮಾಡಲು ಹಾಲು ಒಕ್ಕೂಟಗಳ ಚಿಂತನೆ

​ಪ್ರಜಾವಾಣಿ ವಾರ್ತೆ
Published 19 ಮೇ 2021, 16:29 IST
Last Updated 19 ಮೇ 2021, 16:29 IST
ನಂದಿನಿ
ನಂದಿನಿ   

ಬೆಂಗಳೂರು: ಒಂದೆಡೆ ಲಾಕ್‌ಡೌನ್‌, ಇನ್ನೊಂದೆಡೆ ಹಾಲಿನ ಉತ್ಪಾದನೆ ಹೆಚ್ಚಳದಿಂದ ಹಾಲು ಮಾರಾಟವಾಗದ ಕಾರಣ ಹಾಲು ಒಕ್ಕೂಟಗಳು ಆರ್ಥಿಕವಾಗಿ ಕಷ್ಟಕ್ಕೆ ಸಿಲುಕಿದ್ದು, ರೈತರಿಂದ ಖರೀದಿ ಮಾಡುವ ಹಾಲಿನ ದರ ಕಡಿತಗೊಳಿಸಲು ಮುಂದಾಗಿವೆ.

ಎಲ್ಲೆಡೆ ಮಳೆಯಾಗುತ್ತಿರುವ ಕಾರಣ 14 ಒಕ್ಕೂಟಗಳಲ್ಲೂ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಕಳೆದ 15 ದಿನಗಳ ಹಿಂದೆ 70 ಲಕ್ಷ ಲೀಟರ್ ಹಾಲು ಒಕ್ಕೂಟಗಳಿಗೆ ರೈತರು ಪೂರೈಸುತ್ತಿದ್ದರು. ಈಗ ಈ ಪ್ರಮಾಣ 82 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ.

ಲಾಕ್‌ಡೌನ್ ಕಾರಣದಿಂದ ಹಾಲು ಮಾರಾಟ ಕೂಡ ಕಡಿಮೆಯಾಗಿದೆ. ಇದರಿಂದಾಗಿ 30 ಲಕ್ಷ ಲೀಟರ್ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಒಂದು ಕೆ.ಜಿ ಹಾಲಿನ ಪುಡಿ ಉತ್ಪಾದನೆಗೆ 10 ಲೀಟರ್ ಹಾಲು ಬೇಕಾಗುತ್ತದೆ. ಹಾಲಿನ ಪುಡಿಗೆ ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಹೀಗಾಗಿ, ಒಂದು ಕೆ.ಜಿ ಹಾಲಿನ ಪುಡಿಯ ದರ ‌₹180ಕ್ಕೆ ಕುಸಿದಿದೆ.

ADVERTISEMENT

ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ಒಂದರಲ್ಲೇ ದಿನಕ್ಕೆ ₹50 ಲಕ್ಷ ನಷ್ಟವಾಗುತ್ತಿದೆ. ಬೇರೆ ಒಕ್ಕೂಟಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ, ಹಾಲು ಖರೀದಿ ದರ ಕಡಿಮೆ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಕರ್ನಾಟಕ ಹಾಲು ಮಹಾಮಂಡಳದ(ಕೆಎಂಎಫ್‌) ಅಧಿಕಾರಿಗಳು.

‘ಬಮೂಲ್‌ನಲ್ಲಿ ದಿನಕ್ಕೆ 18 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 9 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಉಳಿದ 9 ಲಕ್ಷ ಲೀಟರ್‌ ಪುಡಿಯಾಗಿ ಪರಿವರ್ತನೆಯಾಗುತ್ತಿದೆ. ಪುಡಿಯಾಗಿ ಪರಿವರ್ತನೆ ಮಾಡುವುದರಿಂದ ಲೀಟರ್‌ಗೆ ₹5 ನಷ್ಟವಾಗುತ್ತಿದೆ. ಈ ನಷ್ಟವನ್ನು ಒಕ್ಕೂಟಗಳು ಎಷ್ಟು ದಿನ ತಡೆದುಕೊಳ್ಳಲು ಸಾಧ್ಯ’ ಎಂದು ಬಮೂಲ್ ಅಧ್ಯಕ್ಷ ಮಾಗಡಿ ನರಸಿಂಹಮೂರ್ತಿ ಹೇಳಿದರು.

‘ಅನಿವಾರ್ಯವಾಗಿ ಖರೀದಿ ದರವನ್ನು ಲೀಟರ್‌ಗೆ ₹1.50 ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಜೂನ್ 1ರಿಂದ ಹೊಸ ಖರೀದಿ ದರ ಜಾರಿಗೆ ಬರಲಿದೆ’ ಎಂದು ಅವರು ತಿಳಿಸಿದರು.

ಲಾಕ್‌ಡೌನ್ ಪ್ಯಾಕೇಜ್‌ ಘೋಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಹಾಲು ಉತ್ಪಾದಕ ರೈತರನ್ನು ಮರೆತಿದ್ದಾರೆ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರೈತರಿಗೆ ನೆರವಾಗಬೇಕು ಎಂದು ನರಸಿಂಹಮೂರ್ತಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.